ಉಡುಪಿಯ ವಾದಿರಾಜ್ ಆರ್‌ಎಸ್‌ಎಸ್‌ನ ಮಂಗಳೂರು ವಿಭಾಗ ಕಾರ್ಯವಾಹ: ನಾ. ಸೀತಾರಾಮ್‌ಗೆ ಕರ್ನಾಟಕ ದಕ್ಷಿಣ ಪ್ರಾಂತ ಜವಾಬ್ದಾರಿ
Wednesday, August 19, 2020
ಮಂಗಳೂರು: ಉಡುಪಿ ಮೂಲದ ವಾದಿರಾಜ್ ಅವರಿಗೆ ಆರ್‌ಎಸ್‌ಎಸ್‌ನಲ್ಲಿ ಪದೋನ್ನತಿಯಾಗಿದೆ. ಅವರು ಇನ್ನು ಮುಂದೆ ಮಂಗಳೂರು ವಿಭಾಗ ಕಾರ್ಯವಾಹ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್.ಎಸ್.ಎಸ್) ಮಂಗಳೂರು ಮತ್ತು ಮೈಸೂರು ವಿಭಾಗದ ಜವಾಬ್ದಾರಿಯಲ್ಲಿ ಮಹತ್ತರ ಬದಲಾವಣೆ ನಡೆದಿದೆ.
ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಕೊಡಗು ಜಿಲ್ಲೆಗಳನ್ನೊಳಗೊಂಡ ರಾಜಕೀಯ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳುವ ಮಂಗಳೂರು ವಿಭಾಗ ಕಾರ್ಯವಾಹರಾಗಿರುವ ಸುಳ್ಯದ ನಾ.ಸೀತಾರಾಮರನ್ನು ಕರ್ನಾಟಕ ದಕ್ಷಿಣ ಪ್ರಾಂತ ಸಹಸೇವಾ ಪ್ರಮುಖ್ ಜವಾಬ್ದಾರಿಗೆ ನಿಯುಕ್ತಿಗೊಳಿಸಲಾಗಿದೆ.
ನಾ.ಸೀತಾರಾಮ ಜಾಗಕ್ಕೆ ಈ ಹಿಂದೆ ವಿಭಾಗ ಸಹಕಾರ್ಯವಾಹರಾಗಿದ್ದ ಉಡುಪಿ ಮೂಲದ ವಾದಿರಾಜರನ್ನು ಮತ್ತು ಸಹಕಾರ್ಯವಾಹ ಜವಾಬ್ದಾರಿಗೆ ಈ ಹಿಂದೆ ವಿಭಾಗ ಶಾರೀರಿಕ ಪ್ರಮುಖರಾಗಿದ್ದ ಕುಂದಾಪುರ ಮೂಲದ ಸುಧೀರ್ ರವರನ್ನು ನಿಯುಕ್ತಿಗೊಳಿಸಲಾಗಿದೆ
ಬಿಜೆಪಿ ಸೇರಿದಂತೆ ಪರಿವಾರ ಕ್ಷೇತ್ರದ ಎಲ್ಲಾ ನಿರ್ಧಾರಗಳು ಮಂಗಳೂರು ವಿಭಾಗ ಕಾರ್ಯವಾಹರ ನೇತೃತ್ವದಲ್ಲಿ ಅನುಷ್ಠಾನಗೊಳ್ಳುವ ಪ್ರತಿಷ್ಠಿತ ಮತ್ತು ಪ್ರಭಾವಿ ಜವಾಬ್ದಾರಿ ಎಂದು ಹೇಳಲಾಗುತ್ತಿದೆ.
ಸೇವಾ ವಿಭಾಗದಲ್ಲಿ ಸೇವಾ ಭಾರತಿ, ವನವಾಸಿ ಕಲ್ಯಾಣ ಮುಂತಾದ ಆರ್.ಎಸ್.ಎಸ್ ಸೇವಾ ವಲಯಗಳಿದ್ದು, ಇದು ರಾಜಕೀಯೇತರ ವಿಭಾಗವಾಗಿದೆ. ನಾ. ಸೀತಾರಾಮ್ ಅವರು 2016 ಆರ್.ಎಸ್.ಎಸ್ ವಿಭಾಗ ಕಾರ್ಯವಾಹರಾಗಿ ನಿಯುಕ್ತಿಗೊಂಡಿದ್ದರು. ಇದೀಗ ವಿಭಾಗದಿಂದ ಪ್ರಾಂತಕ್ಕೆ ಪದೋನ್ನತಿ ಹೊಂದಿದ್ದಾರೆ.
ಇನ್ನುಳಿದಂತೆ ಕರ್ನಾಟಕ ದಕ್ಷಿಣ ಪ್ರಾಂತ ಸಂಪರ್ಕ ಪ್ರಮುಖರಾಗಿ ಶ್ರೀ ದೇವಾನಂದ,ಸಹಸಂಪರ್ಕ ಪ್ರಮುಖರಾಗಿ ಯಾದವ ಕೃಷ್ಣ, ಮೈಸೂರು ಮತ್ತು ಮಂಗಳೂರು ಪರಿಸರ ಸಂರಕ್ಷಣಾ ಗತಿವಿಧಿ ಪ್ರಮುಖರಾಗಿ ವೆಂಕಟರಾಮ್ ಇಲವಾಲ, ಬೆಂಗಳೂರು ಉತ್ತರ ಸಂಘಚಾಲಕರಾಗಿ ನಾಗರಾಜ್,ಮೈಸೂರು ವಿಭಾಗ ಕಾರ್ಯವಾಹರಾಗಿ ವಿಜಯ ಕುಮಾರ್, ಸಹಕಾರ್ಯವಾಹರಾಗಿ ತಿಲಕ್ ಮತ್ತು ಮಹೇಶ್ ರವರನ್ನು ನಿನ್ನೆ ನಡೆದ ಪ್ರಾಂತ ಬೈಠಕ್ ನಲ್ಲಿ ಹೊಸ ಜವಾಬ್ದಾರಿಗೆ ನಿಯುಕ್ತಿಗೊಳಿಸಲಾಗಿದೆ.