
ನಮ್ಮ ಕುಟುಂಬದವರಿಗೆ ಕೈ ಅಧ್ಯಕ್ಷಗಾದಿ ಬೇಡ: ರಾಹುಲ್ ಮಾತಿಗೆ ಪ್ರಿಯಾಂಕಾ ಗಾಂಧಿ ಸರ್ವಮುದ್ರೆ
Wednesday, August 19, 2020
ಗಾಂಧಿ ಕುಟುಂಬಕ್ಕೆ ಸೇರಿಲ್ಲದ ವ್ಯಕ್ತಿಯನ್ನು ನಮ್ಮ ನಾಯಕ ಎಂದು ಒಪ್ಪಿಕೊಳ್ಳಲು ಸಿದ್ಧರಿದ್ದೇವೆ.
ನವದೆಹಲಿ: ಪ್ರಸಕ್ತ ಕಾಂಗ್ರೆಸ್ ಅಧ್ಯಕ್ಷಗಾದಿಯ ಪಟ್ಟ ಖಾಲಿಯಾಗಿದೆ. ಹಂಗಾಮಿ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೋನಿಯಾ ಗಾಂಧಿ ಅವರ ತಾತ್ಕಾಲಿಕ ಅಧಿಕಾರದ ಅವಧಿ ಮುಗಿಯುತ್ತಿದ್ದು, ಪಕ್ಷದ ಅತ್ಯುನ್ನತ ಗಾದಿಗೆ ಯಾರು ಎಂಬ ವಿಷಯ ರಾಜಕೀಯ ಪಡಸಾಲೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇದರ ಬೆನ್ನಲ್ಲೇ, ಗಾಂಧಿ ಕುಟುಂಬಕ್ಕೆ ಸೇರಿಲ್ಲದ ವ್ಯಕ್ತಿಯನ್ನು ನಮ್ಮ ನಾಯಕ ಎಂದು ಒಪ್ಪಿಕೊಳ್ಳಲು ಸಿದ್ಧರಿದ್ದೇವೆ. ಗಾಂಧಿ ಕುಟುಂಬದ ಹೊರಗಿನವರು ಕಾಂಗ್ರೆಸ್ ಅಧ್ಯಕ್ಷರಾಗಲಿ ಎಂದು ಪ್ರಿಯಾಂಕ ಗಾಂಧಿ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರಾಗುವವರು ಒಂದುವೇಳೆ ನೀನು ಉತ್ತರ ಪ್ರದೇಶದ ಜವಾಬ್ದಾರಿ ತೆಗೆದುಕೊಳ್ಳುವುದು ಬೇಡ, ಅಂಡಮಾನ್ ನಿಕೋಬಾರ್ಗೆ ಹೋಗು ಎಂದರೂ ಅದನ್ನು ಖುಷಿಯಿಂದ ಒಪ್ಪಿಕೊಳ್ಳುತ್ತೇನೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಗಾಂಧಿ ಕುಟುಂಬಕ್ಕೆ ಸೇರಿಲ್ಲದ ವ್ಯಕ್ತಿಯನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಚುನಾಯಿಸಬೇಕೆಂದು ನಿಕಟಪೂರ್ವ ಅಧ್ಯಕ್ಷ ರಾಹುಲ್ ಗಾಂಧಿ ಪ್ರಸ್ತಾಪ ಇಟ್ಟಿದ್ದರು. ಈ ಅಭಿಪ್ರಾಯಕ್ಕೆ ಪ್ರಿಯಾಂಕಾ ಗಾಂಧಿ ಸಂಪೂರ್ಣ ಬೆಂಬಲ ನೀಡಿದ್ದಾರೆ. ಕಾಂಗ್ರೆಸ್ನಲ್ಲೀಗ ಮತ್ತೊಮ್ಮೆ ಪಕ್ಷದ ಉತ್ತರಾಧಿಕಾರಿ ಯಾರೆಂಬ ಬಗ್ಗೆ ಚರ್ಚೆಗಳು ಶುರುವಾಗಿವೆ.
ನಮ್ಮ ಕುಟುಂಬ ಯಾರೊಬ್ಬರೂ ಕಾಂಗ್ರೆಸ್ ಪಕ್ಷಕ್ಕೆ ಅಧ್ಯಕ್ಷರಾಗುವುದಿಲ್ಲ ಎಂದು ರಾಹುಲ್ ಗಾಂಧಿ ಈಗಾಗಲೇ ಹೇಳಿದ್ದಾರೆ. ಅದಕ್ಕೆ ನನ್ನ ಸಂಪೂರ್ಣ ಸಹಮತವಿದೆ. ಕಾಂಗ್ರೆಸ್ ಪಕ್ಷ ತನ್ನದೇ ದಾರಿಯಲ್ಲಿ ಸಾಗಬೇಕು. ಅದಕ್ಕೆ ನಮ್ಮ ಕುಟುಂಬಕ್ಕೆ ಸೇರಿರದ ವ್ಯಕ್ತಿ ಅಧ್ಯಕ್ಷರಾಗಬೇಕು ಎಂದು ನನಗೆ ಅನಿಸುತ್ತದೆ ಎಂದು ಕೂಡ ಪ್ರಿಯಾಂಕಾ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.
ಗಾಂಧಿ ಕುಟುಂಬಕ್ಕೆ ಸೇರಿಲ್ಲದ ವ್ಯಕ್ತಿಯನ್ನು ನಾವು ನಮ್ಮ ನಾಯಕ ಎಂದು ಒಪ್ಪಿಕೊಳ್ಳಲು ಸಿದ್ಧರಿದ್ದೇವೆ. ನಮ್ಮ ಪಕ್ಷದ ಅಧ್ಯಕ್ಷರು ಯಾರೇ ಆದರೂ ಅವರ ಆದೇಶವನ್ನು ನಾನು ಖಂಡಿತ ಚಾಚೂ ತಪ್ಪದೆ ಪಾಲಿಸುತ್ತೇನೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲನ್ನು ಅನುಭವಿಸಿದ ನಂತರ ಆ ಸೋಲಿನ ನೈತಿಕ ಹೊಣೆ ಹೊತ್ತು ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದಾದ ಬಳಿಕ ಪಕ್ಷದ ಹಂಗಾಮಿ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಅಧಿಕಾರ ವಹಿಸಿಕೊಂಡಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಪೂರ್ಣಾವಧಿ ಅಧ್ಯಕ್ಷರ ನೇಮಕ ಆಗುವವರೆಗೂ ಸೋನಿಯಾ ಗಾಂಧಿಯವರೇ ಹಂಗಾಮಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಸ್ಪಷ್ಟಪಡಿಸಿತ್ತು.
ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಸಮಸ್ಯೆಯಿದೆ ಎಂದು ಕೆಲ ಕಾಂಗ್ರೆಸ್ ನಾಯಕರು ಆಕ್ಷೇಪದ ಮಾತುಗಳನ್ನಾಡಿದ್ದರು. ಈ ಬಗ್ಗೆ ಹಲವು ಬಾರಿ ಅಸಮಾಧಾನ ಭುಗಿಲೆದ್ದಿತ್ತು. ಕಳೆದ ತಿಂಗಳು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಮ್ಮ ಸರ್ಕಾರದ ಪತನಕ್ಕೆ ಬಿಜೆಪಿ ತಂತ್ರ ರೂಪಿಸುತ್ತಿದೆ ಎಂದು ಆರೋಪಿಸಿದ್ದರು. ಅದಕ್ಕೆ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರೇ ತಮಗೆ ಕಾಂಗ್ರೆಸ್ ಬಗ್ಗೆ ಆತಂಕ ಶುರುವಾಗಿದೆ. ನಮ್ಮ ಪಕ್ಷದ ನಾಯಕರೆನ್ನಲ್ಲ ಬಿಜೆಪಿಯ ಕುದುರೆ ವ್ಯಾಪಾರದಲ್ಲಿ ಖರೀದಿಸುತ್ತಿದೆ. ಅವರನ್ನೆಲ್ಲ ಕಳೆದುಕೊಂಡ ಮೇಲಾದರೂ ಪಕ್ಷದ ನಾಯಕರು ಎಚ್ಚೆತ್ತುಕೊಳ್ಳುತ್ತಾರಾ? ಎಂದು ಟ್ವೀಟ್ ಮಾಡಿದ್ದರು.
ಒಂದುವೇಳೆ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ಒಪ್ಪದೆ ಇದ್ದರೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವುದು ಒಳ್ಳೆಯದು. ಹಾಗೇ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸ್ಥಾನಗಳಿಗೂ ಪಾರದರ್ಶಕ ಚುನಾವಣೆ ನಡೆದರೆ ಉತ್ತಮ. ಇದರಿಂದ ಯಾರಿಗೂ ಅಸಮಾಧಾನ ಇರುವುದಿಲ್ಲ ಎಂದು ಕೇರಳದ ತಿರುವನಂತಪುರಂನ ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಇದೀಗ ಪ್ರಿಯಾಂಕಾ ಗಾಂಧಿ ವಾದ್ರಾ ಗಾಂಧಿ ಕುಟುಂಬಕ್ಕೆ ಸೇರಿಲ್ಲದ ವ್ಯಕ್ತಿ ಕಾಂಗ್ರೆಸ್ ಅಧ್ಯಕ್ಷರಾದರೆ ಉತ್ತಮ ಎಂದು ಹೇಳಿರುವುದು ಸಾಕಷ್ಟು ಮಹತ್ವ ಪಡೆದುಕೊಂಡಿದೆ.