ಕೋವಿಡ್ ಕಾಲದ ವಿಶಿಷ್ಟ ಮದುವೆ..!-'ಝೋಯಾ' ಕಲ್ಪನೆಯಲ್ಲಿ ಮುಗುಳಿ ಕುಟುಂಬದ 'ಡಿಜಿಟಲ್ ಸಂಭ್ರಮ'


ಕರೋನಾ ಸಂದರ್ಭ ಎಲ್ಲೆಡೆ ಸಾಮಾಜಿಕ ಅಂತರದ ಜಾಗೃತಿ. ಮದುವೆಯಲ್ಲೂ 50 ಕ್ಕಿಂತ ಅಧಿಕ ಮಂದಿ ಪಾಲ್ಗೊಳ್ಳುವಂತಿಲ್ಲ. ಕುಟುಂಬಿಕರ ಸಂಬ್ರಮಕ್ಕೆ ಬ್ರೇಕ್. ರಾಜ್ಯದ ಗಡಿದಾಟಿ ಬರುವುದಕ್ಕೂ ನಿರ್ಬಂಧ. ಇಂತಹ ಸನ್ನಿವೇಶದಲ್ಲಿ ವಿಶಿಷ್ಟ ಡಿಜಿಟಲ್ ಮದುವೆಯೊಂದು ಮಂಗಳೂರು ಸಮೀಪದ ಕೊಣಾಜೆ ಪಟ್ಟೋರಿಯ 'ಕೊಣಾಜೆಕಾರ್ಸ್' ಮನೆಯಲ್ಲಿ ಆಗಸ್ಟ್ 13 ರಂದು ಗುರುವಾರ ನಡೆಯಿತು.

ಬಂಟ್ವಾಳ ತಾಲೂಕಿನ ಕನ್ಯಾನ ಸಮೀಪದ 'ಮುಗುಳಿ ಫ್ಯಾಮಿಲಿ' ಊರಿಗೆ ಚಿರಪರಿಚಿತ ಕುಟುಂಬ. ಅಹಮದ್ ಅಲಿ ಕಂಬಾರ್ ಈ ಕುಟುಂಬದ ಹಿರಿಯ ವ್ಯಕ್ತಿ. ಅವರನ್ನು ಮುಗುಳಿ ಹಮೀದ್ ಅಂತ ಊರವರು ಕರೆಯುತ್ತಾರೆ. ಅವರ 8 ಮಂದಿ ಸಹೋದರಿಯರು ಹಾಗೂ ಓರ್ವ ಸಹೋದರ ಸೇರಿ 218 ಸದಸ್ಯರು ಕುಟುಂಬದಲ್ಲಿದ್ದಾರೆ. ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು, ಅಳಿಯಂದಿರು, ಭಾವಂದಿರು, ಅತ್ತಿಗೆ ಅಂತ 4 ತಲೆಮಾರು ಮುಗುಳಿ ಕುಟುಂಬದ್ದು. ಮುಗುಳಿ ಹಮೀದ್ ರವರ ಸಹೋದರಿಯ ಮಗಳ ಮಗಳು ಆರ್ಕಿಟೆಕ್ಟ್ ಎಂಜಿನಿಯರ್ ಆಗಿರುವ ನಫೀಸತ್ ನಹಾನ ಅವರ ಮದುವೆಯು ಚಿಕ್ಕಮಗಳೂರು ಉದ್ಯಮಿ ಇಸ್ಮಾಯಿಲ್ ರಾಖಿಬ್ ಜೊತೆಗೆ ಆಗಸ್ಟ್ 13 ರಂದು ಕೊಣಾಜೆಯ ಪಟ್ಟೋರಿಯಲ್ಲಿ ಅತ್ಯಂತ ಸರಳವಾಗಿ ಸರಕಾರದ ನಿಯಮಾವಳಿ ಪ್ರಕಾರ 50 ಸದಸ್ಯರೊಳಗೆ ನೆರವೇರಿತು.

ಆದರೆ ಈ ಸಂಭ್ರಮದಲ್ಲಿ ಪಾಲ್ಗೊಳ್ಳಲಾಗದ ಮುಗುಳಿ ಕುಟುಂಬದ ಬಹುತೇಕ ಸದಸ್ಯರು ಅಸಹಾಯಕರಾಗಿದ್ದ ಸಂದರ್ಭ ಆ ಕುಟುಂಬದ ಪುಟ್ಟ ಹುಡುಗಿ 15ರ ಹರೆಯದ ಝೋಯಾ ಳಿಗೆ ವಿಶೇಷ ಕಾನ್ಸೆಪ್ಟೊಂದು ತಲೆಗೆ ಹೊಳೆಯಿತು. ಮುಗುಳಿ ಕುಟುಂಬದ 218 ಸದಸ್ಯರನ್ನು ಸೇರಿಸಿ 28 ನಿಮಿಷದ ಒಂದು ವಿಶೇಷ ವೀಡಿಯೋವನ್ನು ತಯಾರಿಸಿದ್ದಾರೆ. ಮುಗುಳಿ ಕುಟುಂಬದ ಹೆಚ್ಚಿನ ಸದಸ್ಯರು ಕಾಸರಗೋಡು ಭಾಗದಲ್ಲಿದ್ದು, ಅವರಿಗೂ ಭಾಗವಹಿಸಲಾಗುತ್ತಿಲ್ಲ. ಅದೇ ರೀತಿ ಯುಎಇ, ಸೌದಿ ಅರೇಬಿಯಾ, ಜರ್ಮನಿ, ನ್ಯೂಝೀಲೇಂಡ್ ನಲ್ಲಿ ಕೂಡಾ ಕುಟುಂಬಿಕರಿದ್ದಾರೆ.

ಮುಂಬೈಯ ಕಲ್ಯಾಣ್ ನಲ್ಲಿರುವ ಕುಟುಂಬ ಸದಸ್ಯೆ ಡಾ. ಜಮೀಲಾ ಹಾಗೂ ಡಾ. ಮಹಮ್ಮದ್ ದಂಪತಿ ಪುತ್ರಿ, ಕಲ್ಯಾಣ್ ಬಿ.ಕೆ.ಬಿರ್ಲಾ ಪಬ್ಲಿಕ್ ಸ್ಕೂಲ್'ನ ಹತ್ತನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಝೋಯಾ ತನ್ನ ಕುಟುಂಬದ ಎಲ್ಲಾ ಸದಸ್ಯರನ್ನು ಸಂಪರ್ಕಿಸಿ, ಅವರ ಶುಭಾಷಯದ ವೀಡಿಯೋಗಳನ್ನು ಸಂಗ್ರಹಿಸಿ 'ನನ್ನೂ ಕೀ ಶಾದಿ' ಎಂಬ ಕ್ಲಿಪ್ ತಯಾರಿಸಿದ್ದಾರೆ. ವೈವಿಧ್ಯತೆಯ ಶುಭಾಷಯಕ್ಕೆ ಒತ್ತು ಕೊಡಲಾಗಿದೆ. ಒಬ್ಬೊಬ್ಬ ಸದಸ್ಯರೂ ಡಿಫರೆಂಟ್ ಮೂಡಲ್ಲಿ ವೀಡಿಯೋ ಮಾಡಿದ್ದಾರೆ. ಇದನ್ನು ಮದುವೆ ದಿನ ಡಿಜಿಟಲ್ ಸ್ಕ್ರೀನ್ ನಲ್ಲಿ ಮದುವೆ ಮನೆಯಲ್ಲಿ ಪ್ರಸಾರ ಮಾಡಿ ಸಂಭ್ರಮಿಸಿದ್ದಾರಲ್ಲದೇ ಮದುವೆ ಗಡಿಬಿಡಿ ಮುಗಿದು ಸಂಜೆ ವೇಳೆ ಝೂಮ್ ಮೀಟಿಂಗ್ ನಡೆಸಿ ಪರಸ್ಪರ ಶುಭಾಶಯ, ಹರಟೆ, ಮಾತುಕತೆಯೊಂದಿಗೆ ಸಂತೋಷವನ್ನು ವಿನಿಮಯ ಮಾಡಿಕೊಂಡಿದ್ದಾರೆ. 28 ನಿಮಿಷದ ರೆಕಾರ್ಡೆಡ್ ವೀಡಿಯೋದಲ್ಲಿ ಮದುಮಗ, ಮದುಮಗಳಿಗೆ ಶುಭಾಶಯ, ಕುರ್ಆನ್ ಪಾರಾಯಣ, ಪ್ರಾರ್ಥನೆ, ಹಿರಿಯರ ಮತ್ತು ಕಿರಿಯರ ವೈಶಿಷ್ಟ್ಯಪೂರ್ಣ ಶುಭಹಾರೈಕೆ, ಮದುವೆಗೆ ಅಲಂಕರಿಸಿ ಹೊರಡುವ ಸನ್ನಿವೇಶದ ಜೊತೆಗೆ ಕುಟುಂಬದ ಪ್ರತಿಭಾನ್ವಿತ ಮಕ್ಕಳ ಡ್ಯಾನ್ಸ್, ಹಾಡು ಮೊದಲಾದ ಮನರಂಜನೆಯೂ ಅಡಕವಾಗಿದೆ.

ಝೋಯಾ ಕಲ್ಪನೆಯ ಈ ವಿಶೇಷ ಡಿಜಿಟಲ್ ಮದುವೆಗೆ ಆಕೆಯ ತಾಯಿ ದಂತವೈದ್ಯೆ ಜಮೀಲಾ ಸಹಕಾರ ನೀಡಿದ್ದಾರೆ. ಕುಟುಂಬ ಸದಸ್ಯರಾದ ಎಂಜಿನಿಯರ್ ಸವಾದ್ ಮೊಗ್ರಾಲ್, ಡಾ. ಇಜಾಝ್ ಜಮಾಲ್ ಕಾಸರಗೋಡು ತಾಂತ್ರಿಕ ಸಹಕಾರ ನೀಡಿದ್ದಾರೆ. ಒಟ್ಟಿನಲ್ಲಿ ಮದುವೆಯ ಸಂಭ್ರಮದ ಕಳೆ ಆ ಮನೆ ಮಾತ್ರವಲ್ಲದೇ 218 ಸದಸ್ಯರನ್ನೊಳಗೊಂಡ ಪ್ರತಿ ಮುಗುಳಿ ಕುಟುಂಬಿಕರ ಮನೆಯಲ್ಲೂ ವಿಜ್ರಂಭಿಸಿತು. ಸಾಮಾಜಿಕ ಜಾಲ ತಾಣ ಇಂತಹ ಡಿಜಿಟಲ್ ಮದುವೆಗೆ ಸಾಕ್ಷಿಯಾಯಿತು. ನೂತನ ವಧೂವರರಿಗೆ ಶುಭಕೋರುವುದರೊಂದಿಗೆ ಪುಟ್ಟ ಹುಡುಗಿ ಝೋಯಾಳ ಪರಿಕಲ್ಪನೆಗೆ ಹ್ಯಾಟ್ಸಾಫ್.
-ರಶೀದ್ ವಿಟ್ಲ.