ಹೊಸ ಮುಖಗಳಿಗೆ ಆದ್ಯತೆ: ಅರಸು ಮಾದರಿ ಅನುಸರಿಸಲು ರಾಜ್ಯ ಕೈ ನಾಯಕರ ಒಲವು


ಬೆಂಗಳೂರು: ಆಡಳಿತಾರೂಢ ಬಿಜೆಪಿ ಹಣಿಯಲು ಕಾಂಗ್ರೆಸ್ ಹೊಸ ತಂತ್ರವನ್ನು ರೂಪಿಸುತ್ತಿದೆ. ಬಿಜೆಪಿ ವಿರುದ್ಧ ಸಂಘಟನಾತ್ಮಕವಾಗಿ ಗಟ್ಟಿಗೊಳ್ಳಲು ಕೈ ನಾಯಕರು ಹೊಸ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದ್ದಾರೆ.

ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಗೆ ಹೊಸ ಮುಖಗಳನ್ನು ಪರಿಚಯಿಸಲು ರಾಜ್ಯ ಕಾಂಗ್ರೆಸ್‌ ಮುಂದಾಗಿದೆ. ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ “ದೇವರಾಜ ಅರಸು ಮಾದರಿ’ಯ ತಂತ್ರವನ್ನು ಪಾಲಿಸಲು ಸಿದ್ಧರಾಗಿದ್ದಾರೆ. ಈ ಪ್ರಯೋಗಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೂ ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಯಾವುದೇ ಸಂದರ್ಭದಲ್ಲಿ ವಿಧಾನಸಭೆ ಚುನಾವಣೆ ಎದುರಾ ದರೂ ಅಭ್ಯರ್ಥಿಗಳು ಸಿದ್ಧರಾಗಿರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು, ರಾಜ್ಯದಲ್ಲಿ 65ರಿಂದ 70 ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಟಿಕೆಟ್‌ ನೀಡಲು ಮುಂದಾಗಿದ್ದಾರೆ. ಈ ಕುರಿತು ಜಿಲ್ಲಾಧ್ಯಕ್ಷರಿಗೆ ಸಂದೇಶ ರವಾನೆಯಾಗಿದೆ ಎಂದು ತಿಳಿದು ಬಂದಿದೆ.

ಸೋತಿರುವ ಕ್ಷೇತ್ರಗಳತ್ತ ಹೆಚ್ಚಿನ ಗಮನ

ಸತತ ಸೋತವರಿಗೆ ಟಿಕೆಟ್ ಇಲ್ಲ

ರಾಜ್ಯದ 224 ಕ್ಷೇತ್ರಗಳಲ್ಲಿ ಪ್ರಸ್ತುತ 64 ಕಾಂಗ್ರೆಸ್‌ ಶಾಸಕರಿದ್ದಾರೆ. ಉಳಿದೆಡೆ ಮಾಜಿ ಶಾಸಕರು ಯಾವ ರೀತಿ ಕೆಲಸ ಮಾಡುತ್ತಿದ್ದಾರೆ ಎನ್ನುವುದರ ಮಾಹಿತಿ ಪಡೆಯಲು ಡಿಕೆಶಿ ನಿರ್ಧರಿಸಿದ್ದಾರೆ. ಸೋತವರು ಸಕ್ರಿಯವಾಗಿ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದ ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಅವಕಾಶ ಕಲ್ಪಿಸಲು ಚಿಂತನೆ ನಡೆಸಿದ್ದಾರೆ. ಜತೆಗೆ ಕಳೆದ ಚುನಾವಣೆಯಲ್ಲಿ 20 ಸಾವಿರಕ್ಕಿಂತ ಅಧಿಕ ಮತಗಳಿಂದ ಸೋತವರು ಹಾಗೂ ಸತತವಾಗಿ ಮೂರು ಚುನಾವಣೆಗಳಲ್ಲಿ ಪರಾಭವಗೊಂಡವರಿಗೂ ಟಿಕೆಟ್‌ ನೀಡದಿರಲು ಆಲೋಚಿಸಿದ್ದಾರೆ ಎಂದು ತಿಳಿದು ಬಂದಿದೆ.

ದೇಶದಲ್ಲಿ ಕಾಂಗ್ರೆಸ್‌ ಇಬ್ಭಾಗವಾದ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ನ ಬಹುತೇಕ ಹಿರಿಯ ನಾಯಕರು ವೀರೇಂದ್ರ ಪಾಟೀಲ್‌ ನೇತೃತ್ವದ ಸಂಸ್ಥಾ ಕಾಂಗ್ರೆಸ್‌ ಜತೆಗೆ ಗುರುತಿಸಿಕೊಂಡಿದ್ದರು. ಆಗ ರಾಜ್ಯದಲ್ಲಿ ಇಂದಿರಾ ಕಾಂಗ್ರೆಸ್‌ನ ನೇತೃತ್ವ ವಹಿಸಿಕೊಂಡಿದ್ದ ಡಿ. ದೇವರಾಜ್‌ ಅರಸು ಅವರು ಚುನಾವಣೆಯಲ್ಲಿ ಬಹುತೇಕ ಹೊಸ ಮುಖಗಳಿಗೆ ಅವಕಾಶ ಕಲ್ಪಿಸಿದ್ದರು. ಅದರಲ್ಲಿ ಯಶಸ್ವಿಯಾದ ಪರಿಣಾಮ ಸುಮಾರು 50ಕ್ಕೂ ಹೆಚ್ಚು ಹೊಸಬರು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು.

ಡಿಕೆಶಿ ಮತ್ತು ಸಿದ್ದರಾಮಯ್ಯ ಯೋಜನೆ ರಾಜ್ಯದಲ್ಲಿ ಹೊಸ ರಾಜಕೀಯ ನಾಯಕರ ಉದಯಕ್ಕೆ ನಾಂದಿಯಾಗಲಿದೆ.