ಹೊರ ರಾಜ್ಯದ ಪ್ರಯಾಣಿಕರಿಗೆ ಹೊಸ ನಿಯಮ: ಪರಿಷ್ಕೃತ ಮಾರ್ಗಸೂಚಿ ಪ್ರಕಟ
ಬೆಂಗಳೂರು: ಹೊರ ರಾಜ್ಯಗಳಿಂದ ಇಲ್ಲಿಗೆ ಬರುವ ಪ್ರಯಾಣಿಕರಿಗೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ಹೊಸ ನಿಯಮಗಳ ಪ್ರಕಾರ, ಸರಕುಗಳ ಸಂಚಾರ ಮತ್ತು ಪ್ರಯಾಣಿಕರ ಅಂತರ-ರಾಜ್ಯ ಪ್ರಯಾಣಕ್ಕೆ ಯಾವುದೇ ನಿರ್ಬಂಧಗಳಿರುವುದಿಲ್ಲ.
ಅಂತರ-ರಾಜ್ಯ ಪ್ರಯಾಣಕ್ಕೆ ಸಂಬಂಧಿಸಿದಂತೆ ಹಿಂದಿನ ಎಲ್ಲ ಸುತ್ತೋಲೆಗಳನ್ನು ರಾಜ್ಯ ಸರ್ಕಾರ ರದ್ದುಗೊಳಿಸಿದೆ.
ಸೇವಾ ಸಿಂಧು ಪೋರ್ಟಲ್ ನಲ್ಲಿ ನೋಂದಣಿ ಮಾಡುವುದು, ಗಡಿ ಭಾಗಗಳಲ್ಲಿ ವೈದ್ಯಕೀಯ ತಪಾಸಣೆ ಮಾಡುವುದು, ಜಿಲ್ಲೆಗಳ ಗಡಿಗಳಲ್ಲಿ ತಪಾಸಣೆ ಮಾಡುವುದು, ಪ್ರಯಾಣಿಕರ ವರ್ಗೀಕರಣ, ಕೈಗಳ ಮೇಲೆ ಮುದ್ರೆ, ಮನೆ ಬಾಗಿಲುಗಳಿಗೆ ಪೋಸ್ಟರ್ ಹಚ್ಚುವಿಕೆ ಮೊದಲಾದ ಎಲ್ಲ ಷರತ್ತುಗಳನ್ನು ಹಿಂದಕ್ಕೆ ಪಡೆದುಕೊಂಡಿದೆ. ಈ ಮೂಲಕ ಸುಲಲಿತ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿದೆ.
ಪ್ರಯಾಣಿಕರಿಗೆ ಸರ್ಕಾರ ನೀಡಿರುವ ಸೂಚನೆಗಳು
1. ರಾಜ್ಯಕ್ಕೆ ಬರುವ ವೇಳೆ ಕೋವಿಡ್ ಲಕ್ಷಣಗಳು ಇಲ್ಲದಿದ್ರೆ 14 ದಿನಗಳ ಕ್ವಾರಂಟೈನ್ ಅಗತ್ಯವಿಲ್ಲ ಮತ್ತು ಅವರು ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಬಹುದು. ರಾಜ್ಯಕ್ಕೆ ಬಂದ 14 ದಿನಗೊಳಗಾಗಿ ಕೋವಿಡ್-19 ಲಕ್ಷಣಗಳ ಕಂಡು ಬಂದಲ್ಲಿ ಸ್ವಯಂ ನಿಗಾ ವಹಿಸುವುದು. ಆಪ್ತಮಿತ್ರ ಸಹಾಯವಾಣಿ 14410ಗೆ ಕರೆ ಮಾಡುವುದು.
2. ರಾಜ್ಯಕ್ಕೆ ಆಗಮಿಸುವ ವೇಳೆ ಕೋವಿಡ್-19 ಲಕ್ಷಣಗಳಿದ್ರೆ ತಕ್ಷಣವೇ ಸ್ವಯಂ ಪ್ರತ್ಯೇಕವಾಗಿರುವುದು. ತಪ್ಪದೇ ವೈದ್ಯಕೀಯ ಸಮಾಲೋಚನೆ ಪಡೆಯುವುದು ಮತ್ತು ಆಪ್ತಮಿತ್ರ ಸಹಾಯವಾಣಿ 14410ಗೆ ಕರೆ ಮಾಡುವುದು.
3. ಕೋವಿಡ್ 19 ತಡೆಗಟ್ಟಲು ಫೇಸ್ ಮಾಸ್ಕ್ ಧರಿಸುವುದು. 2 ಮೀಟರ್ ದೈಹಿಕ ಅಂತರ ಕಾಪಾಡಿಕೊಳ್ಳುವುದು. ಆಗಾಗ್ಗೆ ಕೈ ತೊಳೆಯುವುದು, ಸ್ಯಾನಿಟೈಸರ್ ಬಳಕಲೆ ಸೇರಿದಂತೆ ಇತ್ಯಾದಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು.