ಕೆಲಸದೊತ್ತಡ, ಮೇಲಾಧಿಕಾರಿಗಳ ಕಿರುಕುಳ: ಬ್ಯಾಂಕ್ ನೌಕರ ಶಾಖೆಯಲ್ಲೇ ಆತ್ಮಹತ್ಯೆ
ಬಳ್ಳಾರಿ: ಕೊರೋನಾ ಭೀತಿಯ ಬೆನ್ನಲ್ಲೇ ಅಧಿಕಾರಿಗಳ ಆತ್ಮಹತ್ಯೆ ಪ್ರಕರಣಗಳ ಸರಣಿ ಮುಂದುವರಿದಿದೆ. ನಂಜನಗೂಡು ವೈದ್ಯಾಧಿಕಾರಿ ಆತ್ಮಹತ್ಯೆ ಬಳಿಕ ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತ ಬ್ಯಾಂಕ್ ನೌಕರನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜ್ಯದಲ್ಲಿ ವರದಿಯಾಗಿದೆ.
ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನಲ್ಲಿ ಈ ದುರಂತ ಸಂಭವಿಸಿದ್ದು, ಸಂಸ್ಥೆಯ ನೌಕರ ಬ್ಯಾಂಕ್‍ನಲ್ಲಿಯೇ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ಬ್ಯಾಂಕ್ ನೌಕರ ಮಹೇಶ್ ಎಂದು ತಿಳಿದುಬಂದಿದೆ. ಮಹೇಶ್ ಬ್ಯಾಂಕ್‍ನಲ್ಲಿ ಲೀಗಲ್ ಅಡ್ವೈಸರ್ ಆಗಿ ಕೆಲಸ ಮಾಡುತ್ತಿದ್ದು, ಲಾಕ್‍ಡೌನ್ ಹಿನ್ನೆಲೆಯಲ್ಲಿ ಬಿಸಿನೆಸ್ ಇಲ್ಲದ ಕಾರಣ ಸರಿಯಾದ ದಾಖಲೆ ಇಲ್ಲದಿದ್ದರೂ ಲೋನ್ ನೀಡುವಂತೆ ಅಧಿಕಾರಿಗಳು ಒತ್ತಡ ಹೇರುತ್ತಿದ್ದರಂತೆ. ಈ ಹಿನ್ನೆಲೆಯಲ್ಲಿ ಬೇಸತ್ತು ಬ್ಯಾಂಕ್‍ನಲ್ಲೇ ವಿಷ ಸೇವಿಸಿ ಮಹೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಘಟನೆ ಕುರಿತು ಮಾತನಾಡಿದ ಮೃತ ಮಹೇಶ್ ಸಹೋದರ, ತನ್ನ ಸಹೋದರನಿಗೆ ಎಷ್ಟು ಹಿಂಸೆ ನೀಡಿದ್ದಾರೆ ಎಂಬ ಬಗ್ಗೆ ನಮ್ಮ ಬಳಿ ಎಂದು ಹೇಳಿಕೊಂಡಿರಲಿಲ್ಲ. ಒಂದೊಮ್ಮೆ ಹೇಳಿದ್ದರೆ ಕೆಲಸ ಬಿಟ್ಟು ಬಾ ಎಂದು ಹೇಳುತ್ತಿದ್ದೆ. ಆದರೆ ವಿಡಿಯೋ ಮಾಡಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಪ್ರಕರಣ ದಾಖಲಿಸುತ್ತೇವೆ. ನನ್ನ ಬಳಿ ಇರುವ ಸಾಕ್ಷಿಗಳನ್ನು ಪೊಲೀಸರು ಕೇಳಿದ್ದಾರೆ. ಈಗ ಏನು ಮಾಡಿದರೂ ನನ್ನ ಸಹೋದರನನ್ನು ಕಳೆದುಕೊಂಡಿದ್ದು, ಆತನಿಗೆ ಇಬ್ಬರು ಸಣ್ಣ ಮಕ್ಕಳಿದ್ದಾರೆ. ನಕಲಿ ಖಾತಾ ಇಟ್ಟು ಬ್ಯಾಂಕ್‌ನಲ್ಲಿ ಸಾಲ ಪಡೆಯುತ್ತಿದ್ದ ವಿರುದ್ಧ ನಮ್ಮ ಬಳಿ ಮಾತನಾಡಿದ್ದರು ಅಷ್ಟೇ ಎಂದು ವಿವರಿಸಿದ್ದಾರೆ.
ಸಾವಿಗೆ ಮೇಲಾಧಿಕಾರಿಗಳ ಒತ್ತಡ ಕಾರಣ?
ದಾಖಲೆ ಇಲ್ಲದೆ ಸಾಲಕ್ಕೆ ಒತ್ತಡ..!
ಮೇಲಾಧಿಕಾರಿಗಳು ಯಾವುದೇ ದಾಖಲೆ ಇಲ್ಲದೇ ಸಾಲ ನೀಡಲು ಒತ್ತಡ ಹಾಕಿದ್ದೆ ಆತ್ಮಹತ್ಯೆಗೆ ಕಾರಣ ಎಂದು ಸದ್ಯ ಕುಟುಂಬಸ್ಥರು ಆರೋಪಿಸಿದ್ದಾರೆ. ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿರುವ ಬಗ್ಗೆ ಮಾಹಿತಿ ಇದೆ. ಡೆತ್ ನೋಟ್ ಅನ್ವಯ ಪ್ರಕರಣ ದಾಖಲಿಸಲಾಗುವುದು. ಬ್ಯಾಂಕ್‍ನಲ್ಲಿ ಬಹುದೊಡ್ಡ ಹಗರಣವೇ ನಡೆದಿರುವ ಅನುಮಾನವಿದೆ. ಆತ್ಮಹತ್ಯೆ ಮಾಡಿಕೊಂಡ ವಿಡಿಯೋದಲ್ಲಿ ಮೂವರು ಅಧಿಕಾರಿಗಳ ಹೆಸರು ಹೇಳಿದ್ದಾರೆ ಎಂಬ ಬಗ್ಗೆ ಮಾಹಿತಿ ಇದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.