ಗಂಗಾಧರ ಭಟ್ ಇಲ್ಲದ 'ಸತ್ಯಸಾಯಿ ಲೋಕ' ನೆನಸಲಸಾಧ್ಯ- ಬರಹ; ರಶೀದ್ ವಿಟ್ಲ
Thursday, August 27, 2020
ಗ್ರಾಮೀಣ ಪ್ರದೇಶ, ಪಚ್ಚೆಪೈರಿನ ಹಳ್ಳಿ ಅಳಿಕೆಯನ್ನು ಲೋಕಕ್ಕೇ ಪರಿಚಯಿಸಿದ ಕೀರ್ತಿ ಶ್ರೀ ಸತ್ಯಸಾಯಿ ಲೋಕಸೇವಾ ಸಂಸ್ಥೆಗೆ ಸಲ್ಲುತ್ತದೆ. ವಿದ್ಯಾದಾನ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಖ್ಯಾತಿ ಪಡೆದಿರುವ ಈ ಸಂಸ್ಥೆಯ ಅಧ್ಯಕ್ಷರು ಯು.ಗಂಗಾಧರ ಭಟ್. ಇಂದು ಅವರು ತಮ್ಮ 90ನೇ ವಯಸ್ಸಲ್ಲಿ ನಮ್ಮನ್ನಗಲಿದ್ದಾರೆ. ಸತ್ಯಸಾಯಿ ಬಾಬಾ ಅವರ ಭಕ್ತರಾಗಿದ್ದ ಗಂಗಾಧರಣ್ಣ ತುಂಬಾ ಸೌಮ್ಯ ಸ್ವಭಾವಿ. ಅಳಿಕೆಗೆ ಯಾರೇ ಹೋದರೂ ನಗುನಗುತಾ ಕೈಮುಗಿದು ಸ್ವಾಗತಿಸುವ ಜೊತೆಗೆ ಬಾಯಾರಿಕೆ, ಊಟ ಕೊಟ್ಟು ಕಳುಹಿಸುವ ಉದಾರಿ. ನನಗೂ ಅವರಿಗೂ ಸುಮಾರು 19 ವರ್ಷದ ನಂಟು. ನನ್ನನ್ನು ಯಾವಾಗ ನೋಡಿದ್ರೂ 'ಸ್ವಲ್ಪ ತೂಕ ಕಡಿಮೆ ಮಾಡು ಮಾರಾಯ...' ಅಂತ ಕಿವಿಮಾತು ಹೇಳಿ ಬೆನ್ನು ತಟ್ಟುತ್ತಿದ್ದರು. ಅಳಿಕೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಸಂದರ್ಭ ಉದ್ಘಾಟನೆಗೆ ಅಂದಿನ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರನ್ನು ಆಹ್ವಾನಿಸಲು ಗಂಗಾಧರಣ್ಣ ಜೊತೆಗೆ ನಾನೂ ಬೆಂಗಳೂರಿಗೆ ಹೋಗಿದ್ದೆ. ಅವರಿಗೆ ಅಂದು ಮುಖ್ಯಮಂತ್ರಿಗಳು ನೀಡಿದ ಮರ್ಯಾದೆ, ಅಳಿಕೆಯಿಂದ ಕರೆದರೆ ಬರಲಾಗದೇ ಇರುತ್ತದೆಯೇ? ಎಂಬ ಸದಾನಂದ ಗೌಡರ ಮಾತು ಈಗಲೂ ನೆನಪಿದೆ. ಮುಖ್ಯಮಂತ್ರಿಗಳ ನಿವಾಸ 'ಕೃಷ್ಣಾ'ದಲ್ಲಿ ಎಡೆಬಿಡದ ಜನಸಂದಣಿ, ಉನ್ನತಾಧಿಕಾರಿಗಳಿದ್ದರೂ ನಮ್ಮನ್ನು ಖಾಸಗಿ ಕೋಣೆಯಲ್ಲಿ ಕುಳ್ಳಿರಿಸಿ ಮುಖ್ಯಮಂತ್ರಿಗಳು ಮಾತನಾಡಿಸಿ ಬಾಯಾರಿಕೆ ನೀಡಿ ಕಳುಹಿಸಿದ್ದರು. ಇದು ಗಂಗಾಧರಣ್ಣನಿಗೆ ಸಂದ ಗೌರವ. ಅಂದು ಅಳಿಕೆಯಿಂದ ಬೆಂಗಳೂರಿಗೆ ಗಂಗಾಧರಣ್ಣ ಹೊರಡುವಾಗ ತಮ್ಮ ಪ್ರಯಾಣವನ್ನು ಗೌಪ್ಯವಾಗಿರಿಸಿದ್ದರು. ಆದರೂ ಬೆಂಗಳೂರಿನ ಶಿಷ್ಯಂದಿರು, ಅಭಿಮಾನಿಗಳಿಗೆ ಈ ಸುದ್ದಿ ಸೋರಿಕೆಯಾಗಿತ್ತು. ನಾವು ಬೆಂಗಳೂರು ತಲುಪಿ ಮುಖ್ಯಮಂತ್ರಿ ಭೇಟಿಯಾಗಿ ಹಿಂದಿರುಗುವಾಗ ಅಭಿಮಾನಿಗಳು ಮುತ್ತಿಕ್ಕಿದ್ದರು. ಭವ್ಯ ಸ್ವಾಗತ, ಭೂರಿ ಭೋಜನದ ವ್ಯವಸ್ಥೆ. ಅಳಿಕೆಯ ಹಳೆ ವಿದ್ಯಾರ್ಥಿಗಳಾದ ದೊಡ್ಡ ದೊಡ್ಡ ವೈದ್ಯರು, ಉನ್ನತ ಅಧಿಕಾರಿಗಳು, ಉದ್ಯೋಗಸ್ಥರು ನಾಮುಂದು, ತಾಮುಂದು ಎಂಬಂತೆ ಅವರವರ ನಿವಾಸಕ್ಕೆ ಗಂಗಾಧರಣ್ಣನನ್ನು ಕರೆದೊಯ್ಯಲು ಮುಗಿಬಿದ್ದಿದ್ದರು. ಊರಿಗೆ ಹಿಂತಿರುಗುವ ಹಾದಿಯಲ್ಲಿ ಸೂರ್ಯ ಕಂತುವ ಹೊತ್ತಿಗೆ ಹಾಸನ ತಲುಪಿದಾಗ ಸಕಲೇಶಪುರದ ಶಿಷ್ಯರು ಫೋನ್ ಮಾಡಿ ರಾತ್ರಿಯ ಡಿನ್ನರ್ ಗೆ ಆಹ್ವಾನಿಸಿದ್ದರು. ಹೀಗೇ ಹೋದಲೆಲ್ಲಾ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಗಂಗಾಧರಣ್ಣನ ನೆಟ್ವರ್ಕ್ ನೋಡುವಾಗ ಆಶ್ಚರ್ಯವಾಗಿತ್ತು. ತುಂಬಾ ಸರಳತೆ, ಮಗುವಿನ ಮುಗ್ಧತೆ, ತೂಕದ ಮಾತು ಗಂಗಾಧರಣ್ಣನ ಪ್ಲಸ್ ಪಾಯಿಂಟ್. ನಿವೃತ್ತ ಲೋಕಾಯುಕ್ತರಾದ ಸಂತೋಷ್ ಹೆಗ್ಡೆಯವರನ್ನು ಅಳಿಕೆ ಸಂಸ್ಥೆಗೆ ಬರಮಾಡಿಕೊಳ್ಳಬೇಕೆಂದು ಗಂಗಾಧರಣ್ಣ ವಿನಂತಿಸಿದ್ದರು. ಸಂತೋಷ್ ಹೆಗ್ಡೆಯವರು ನನಗೆ ಆಪ್ತರಾದುದರಿಂದ ಅಂದು ಆಹ್ವಾನಿಸಿದ್ದೆ. ಪ್ರೀತಿಯಿಟ್ಟು ಬಂದಿದ್ದರು. ಜೇಸಿಐ ಸಹಯೋಗದೊಂದಿಗೆ ಕಾರ್ಯಕ್ರಮ ಮಾಡಿದೆವು. ಅಂದು ಗಂಗಾಧರಣ್ಣ ಸಂತೋಷ್ ಹೆಗ್ಡೆ ಜೊತೆ ತೋರಿದ ಪ್ರೀತಿ ಹೇಳತೀರದು. ಗಂಗಾಧರಣ್ಣ ಪ್ರತಿ ಬಾರಿ ಸಿಕ್ಕಾಗಲೂ ಅವರಲ್ಲೊಂದು ಹೊಸ ಕಲ್ಪನೆಗಳು, ಹೊಸತನ ಇರುತ್ತಿತ್ತು. ಬಡ ಅಶಕ್ತರ ಕುರಿತು ಕಾಳಜಿ ಇರುತ್ತಿತ್ತು. ಮಕ್ಕಳಿಗೆ ವಿದ್ಯೆ ನೀಡುವ ವಿಚಾರದಲ್ಲಿ ಅಪಾರ ಮುತುವರ್ಜಿ ವಹಿಸಿದ್ದರು. ಊರಿಗೊಂದು ಉತ್ತಮ ದರ್ಜೆಯ ಆಸ್ಪತ್ರೆಯ ಕನಸನ್ನೂ ನನಸು ಮಾಡಿದರು. ಆದರೆ ಅದ್ಯಾವುದೂ ಕಮರ್ಷಿಯಲ್ ಆಗಿರಲಿಲ್ಲ. ಎಲ್ಲವೂ ಉಚಿತ ಯೋಜನೆಗಳು. ಕ್ವಾಲಿಟಿ ಸೇವೆ ಕೂಡಾ. ಇಂದು ಗಂಗಾಧರಣ್ಣ ನಮ್ಮ ಜೊತೆಗಿಲ್ಲ. ಆದರೆ ಅವರು ಹಾಕಿಕೊಟ್ಟ ಆದರ್ಶ ನಮ್ಮ ಜೊತೆಗಿದೆ. ಹುಟ್ಟು-ಸಾವಿನ ನಡುವಿರುವ ಅವರ ಜೀವನದ ಪಾಠಗಳ ಪುಟಗಳು ನಮ್ಮೊಂದಿಗಿವೆ. ಸೃಷ್ಟಿಕರ್ತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಆಶಿಸುವೆನು.
ಬರಹ: ರಶೀದ್ ವಿಟ್ಲ