ಆಕಾಶಭವನದಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಸ್ವಾತಂತ್ರ್ಯ ದಿನಾಚರಣೆ
ಮಂಗಳೂರು: ನಗರದ ಆಕಾಶಭವನದಲ್ಲಿ ಶಾಲಾ ವಿದ್ಯಾರ್ಥಿಗಳೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವ ಮೂಲಕ ವಿಶಿಷ್ಟವಾಗಿ ಸ್ವಾತಂತ್ಯ ದಿನವನ್ನು ಆಚರಿಸಿದರು.
ಚಿಂತನ ಸಾಂಸ್ಕೃತಿಕ ಬಳಗ ಮತ್ತು ಗೊಲ್ಲರಬೆಟ್ಟು ಬ್ಯಾಡ್ಮಿಂಟನ್ ಕ್ಲಬ್ ಜಂಟಿಯಾಗಿ ಆಕಾಶಭವನದಲ್ಲಿ ಆಯೋಜಿಸಿದ್ದ ಸ್ವಾತಂತ್ಯ ದಿನಾಚರಣೆಯಲ್ಲಿ ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು. ಚಿತ್ರ ಕಲಾ ಪ್ರದರ್ಶನ ಹಾಗೂ ಹಾಡು, ಭಾಷಣ ಮತ್ತು ಗಿಟಾರ್ ಕಲಾ ಪ್ರದರ್ಶನದ ಮೂಲಕ ಸ್ವಾತಂತ್ಯ ದಿನಾಚರಣೆಗೆ ರಂಗು ತಂದರು.
ಬಳಿಕ ಕಾರ್ಯಕ್ರಮದ ಬಗ್ಗೆ ಮಾತನಾಡಿದ ರಂಗಕರ್ಮಿ ಹಾಗೂ ಹಿರಿಯ ಪತ್ರಕರ್ತ ಮೈಮ್ ರಾಮ್‌ದಾಸ್, ಮಕ್ಕಳೇ ಮುಂದೆ ನಿಂತು ಕಾರ್ಯಕ್ರಮಗಳನ್ನು ನೀಡಿದ್ದು ನಿಜಕ್ಕೂ ಮಾದರಿಯಾಗಿವೆ ಎಂದು ಶ್ಲಾಘಿಸಿದರು.
ಮಕ್ಕಳು ಕೊರೋನಾ ಸಂದರ್ಭದಲ್ಲಿ ನಾಲ್ಕು ಗೋಡೆ ಮಧ್ಯೆ ಇದ್ದು ಮೊಬೈಲ್, ಟಿವಿ ನೋಡುವುದಕ್ಕಷ್ಟೇ ಸೀಮಿತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಲಾಕ್‌ಡೌನ್ ಸಂದರ್ಭವನ್ನು ಸದುಪಯೋಗ ಮಾಡಿಕೊಂಡಿರುವ ಆಕಾಶಭವನದ ಮಕ್ಕಳು ಸಾಂಸ್ಕೃತಿಕವಾಗಿಯೂ ಪ್ರಬುದ್ಧರಾಗುತ್ತಿರುವುದು ಸಕಾರಾತ್ಮಕ ಬೆಳವಣಿಗೆ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಕಲಾವಿದ ಶಿಕ್ಷಕ ಪ್ರೇಮನಾಥ್ ಮರ್ಣೆ, ಕೋವಿಡ್ ವಾರಿಯರ್ ರಾಜೇಶ್, ಗಿಟಾರ್ ಶಿಕ್ಷಕ ಆದರ್ಶ್, ವಕೀಲ ಸುಕೇಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಜಯ್ ಸ್ವಾಗತಿಸಿದರೆ ಶಿಕ್ಷಕಿ ಸಂಧ್ಯಾ ಪ್ರೇಮ್ ಧನ್ಯವಾದ ಸಮರ್ಪಿಸಿದರು.