
ಬಿಎಸ್ವೈ, ಅಶೋಕ್ ವೈಮಾನಿಕ ಸಮೀಕ್ಷೆ ನಾಳೆ; ಮಳೆ, ಪ್ರವಾಹಬಾಧಿತ ಪ್ರದೇಶದ ವಸ್ತುಸ್ಥಿತಿ ವೀಕ್ಷಣೆ
Monday, August 24, 2020
ಬೆಂಗಳೂರು: ಮಳೆ ಹಾಗೂ ಪ್ರವಾಹಬಾಧಿತ ಪ್ರದೇಶದ ವೀಕ್ಷಣೆ, ಕೈಗೊಂಡ ಕ್ರಮಗಳ ಪರಿಶೀಲನೆಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಳೆ ರಾಜ್ಯ ಪ್ರವಾಸ ಕೈಗೊಂಡಿದ್ದು, ಕಂದಾಯ ಸಚಿವ ಆರ್.ಅಶೋಕ್ ಅವರೊಂದಿಗೆ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.
ಬೆಳಗಾವಿಯಲ್ಲಿ ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ ಸಚಿವರು, ಸಂಸದ-ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ರ್ಚಚಿಸಿ, ಹಾನಿ ಪ್ರಮಾಣ ಮತ್ತು ಕೈಗೊಂಡ ಕ್ರಮಗಳ ಮಾಹಿತಿ ಪಡೆಯಲಿದ್ದಾರೆ. ವಾಯುಪಡೆ ಹೆಲಿಕಾಪ್ಟರ್ನಲ್ಲಿ ಬೆಳಗ್ಗೆ 11.15ಕ್ಕೆ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿ, ಮಧ್ಯಾಹ್ನ 12.30ಕ್ಕೆ ಆಲಮಟ್ಟಿ ಅಣೆಕಟ್ಟೆ ಆವರಣದ ಹೆಲಿಪ್ಯಾಡ್ನಲ್ಲಿ ಇಳಿಯಲಿದ್ದಾರೆ. ನಂತರ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯಕ್ಕೆ ಭೇಟಿ ನೀಡುವರು. ಮಧ್ಯಾಹ್ನ 1ಕ್ಕೆ ಆಲಮಟ್ಟಿ ಅತಿಥಿ ಗೃಹದಲ್ಲಿ ಮಳೆ ಹಾನಿಗೆ ಸಂಬಂಧಿಸಿದಂತೆ ವಿಜಯಪುರ, ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳ ಸಚಿವರು, ಸಂಸದ-ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ಇತರ ಅಧಿಕಾರಿಗಳೊಂದಿಗೆ ಸಮಾಲೋಚಿಸಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಐಎಎಫ್ ಹೆಲಿಕಾಪ್ಟರ್ನಲ್ಲಿ ಹೊರಟು ಮಳೆ ಹಾಗೂ ಪ್ರವಾಹಬಾಧಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸುವರು.
ಡಿಕೆಶಿ ನೆರೆ ಪ್ರವಾಸ ಮುಂದೂಡಿಕೆ: ನೆರೆ ಪೀಡಿತ ಪ್ರದೇಶಗಳ ಭೇಟಿಗೆ ಮುಂದಾಗಿದ್ದ ಡಿ.ಕೆ.ಶಿವಕುಮಾರ್ ಕೊನೇ ಹಂತದಲ್ಲಿ ಹಿಂದೆ ಸರಿದಿದ್ದಾರೆ. ಆ.24ರಿಂದ 26ರ ವರೆಗೆ ವಿವಿಧ ಜಿಲ್ಲೆಗಳ ನೆರೆ ಪೀಡಿತ ಪ್ರದೇಶ ವೀಕ್ಷಣೆ ಮತ್ತು ಪಕ್ಷದ ಜಿಲ್ಲಾ ಘಟಕಗಳೊಂದಿಗೆ ಸಭೆಯೂ ಆಯೋಜನೆಗೊಂಡಿತ್ತು. ಆದರೆ, ಬೆನ್ನು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಶ್ರಾಂತಿಯಲ್ಲಿದ್ದಾರೆಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ತಗ್ಗಿದ ಮಳೆ: ಕಳೆದ ವಾರದಿಂದ ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ತಗ್ಗಿದೆ. ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ 5 ದಿನ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.