-->

ಏಳನೇ ತರಗತಿಯಲ್ಲಿ ಕಟೀಲು ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರಸಂಗ ಬರೆದ ಶಿಮಂತೂರು ಡಾ. ನಾರಾಯಣ ಶೆಟ್ಟಿ ನಿಧನ

ಏಳನೇ ತರಗತಿಯಲ್ಲಿ ಕಟೀಲು ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರಸಂಗ ಬರೆದ ಶಿಮಂತೂರು ಡಾ. ನಾರಾಯಣ ಶೆಟ್ಟಿ ನಿಧನ


(ಗಲ್ಫ್  ಕನ್ನಡಿಗ)ಮಂಗಳೂರು:ಏಳನೆಯ ತರಗತಿಯಲ್ಲಿಯೇ 'ಕಟೀಲು ಕ್ಷೇತ್ರ ಮಹಾತ್ಮೆ' ಎಂಬ ಯಕ್ಷಗಾನ ಪ್ರಸಂಗ ರಚಿಸಿದ
 'ಛಂದೋಬ್ರಹ್ಮ' ಬಿರುದು ಪಡೆದ  ಖ್ಯಾತ ಯಕ್ಷಗಾನ ಪ್ರಸಂಗಕರ್ತ ಶಿಮಂತೂರು ಡಾ. ಎನ್. ನಾರಾಯಣ ಶೆಟ್ಟಿ (86) ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

(ಗಲ್ಫ್  ಕನ್ನಡಿಗ) ಏಳನೆಯ ತರಗತಿಯಲ್ಲಿಯೇ 'ಕಟೀಲು ಕ್ಷೇತ್ರ ಮಹಾತ್ಮೆ' ಎಂಬ ಯಕ್ಷಗಾನ ಪ್ರಸಂಗ ರಚಿಸಿದ ಇವರು ವಿದ್ವತ್ ವಲಯದಲ್ಲಿ ಅಚ್ಚರಿಯನ್ನು ಸೃಷ್ಟಿಸಿದ್ದರು‌.  ಕನ್ನಡ, ತುಳು, ಇಂಗ್ಲಿಷ್ ಭಾಷೆಗಳಲ್ಲಿ ಇವರು ಅನೇಕ ಪ್ರಸಂಗಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ರಾಣಾ ಪ್ರತಾಪಸಿಂಹ, ಸಾಮ್ರಾಟ ಅಶೋಕ, ಸೊರ್ಕುದ ಸಿರಿಗಿಂಡೆ, ಬಿರ್ದ್‌ದ ಬೈರವೆರ್, ಬೆಂಗ್‌ದ ಬಾಲೆನಾಗಿ, ರಾಜಮುದ್ರಿಕೆ ಶ್ರೀ ಕೃಷ್ಣದೇವರಾಯ, ದೀಕ್ಷಾ ಕಂಕಣ, ಪಾರಿಜಾತ, ಗೋವಾ ದುರಂತ, ಕೃಷಿ ವಿಜಯ, ಪಂಜುರ್ಲಿ ಸಂಧಾನ, ಕಂಡತಪುಣಿ ಕಾಳಗ, ಮಾಗಧ ವಧೆ (ಇಂಗ್ಲಿಷ್​) ಮುಂತಾದ ಪ್ರಸಂಗಗಳನ್ನು ರಚಿಸಿದ್ದಾರೆ.

(ಗಲ್ಫ್  ಕನ್ನಡಿಗ)ಶಿಮಂತೂರು ಅವರ ಯಕ್ಷಗಾನ ಛಂದೋಂಬುಧಿ ಮಹಾಗ್ರಂಥಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಡಿ.ಲಿಟ್ ಪದವಿ ಸಿಕ್ಕಿದೆ. ಇದು ಯಕ್ಷಗಾನಕ್ಕೆ ಮಾತ್ರವಲ್ಲ ಕನ್ನಡ ಸಾರಸ್ವತ ಲೋಕಕ್ಕೆ ನೀಡಿರುವ ಬಹುದೊಡ್ಡ ಕೊಡುಗೆಯಾಗಿದೆ. ’ಕನ್ನಡದ ಅನರ್ಘ್ಯ ಛಂದೋರತ್ನಗಳು’ ಎಂಬ ಕೃತಿಯೂ ಕಾವ್ಯ ಲಕ್ಷಣಭರಿತ ವಿಚಾರಗಳಿಂದ ಶೃಂಗಾರಗೊಂಡ ವಿವಿಧ ಛಂದಃ ಕುಸುಮಗಳ ಗ್ರಂಥವಾಗಿದೆ. ನಾರಾಯಣ ಶೆಟ್ಟಿ ಅವರು ಅಂಶಝಂಪೆ, ಯಕ್ಷಗಾನದ ಪಂಚಘಾತ ಮಟ್ಟೆ, ನಾಗವರ್ಮನ ಚೌಪದಿಕೆ, ಮದನವತಿ, ಚಿತ್ರಾ-ವಿಚಿತ್ರಾ ತ್ರಿಪದಿ, ಧ್ರುವತಾಲ ಬಂಧಗಳು, ಚೌತಾಲ, ತಿಶ್ರತ್ರಿಪುಟ ಮತ್ತು ಆತಾಲ ಶರೀರ ವ್ಯಾಪಿಯಾದ ಅನ್ಯತಾಲಗಳು ಮುಂತಾದ  ವಿಷಯಗಳ ಕುರಿತಾಗಿ ಸಂಶೋಧನಾತ್ಮಕ ವಿಚಾರಗಳನ್ನು ಮಂಡಿಸಿದ್ದರು.

(ಗಲ್ಫ್  ಕನ್ನಡಿಗ)ಅನೇಕ ಹೊಸವೃತ್ತ, ನೂತನ ಷಟ್ಪದಿಗಳನ್ನು ರಚಿಸಿದ್ದ ಕವಿ ನಾರಾಯಣ ಶೆಟ್ಟರು ಯಕ್ಷಗಾನ ಬಯಲಾಟ ಅಕಾಡೆಮಿಯ ಸದಸ್ಯರಾಗಿದ್ದರು. ಇವರಿಗೆ ದೇರಾಜೆ ಸ್ಮೃತಿ ಗೌರವ, ಅಗರಿ, ಕುಕ್ಕಿಲ ಪ್ರಶಸ್ತಿ, ಸ್ಕಂದ ಪುರಸ್ಕಾರ, ತಲ್ಲೂರು ಕನಕಾ ಅಣ್ಣಯ್ಯ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಮುದ್ದಣ ಪುರಸ್ಕಾರ, ತುಳು ಸಾಹಿತ್ಯ ಅಕಾಡೆಮಿ ಗೌರವ ಅಲ್ಲದೆ ಅಭಿನವ ನಾಗವರ್ಮ, ಛಂದೋ ವಾರಿಧಿ ಚಂದ್ರ, ಯಕ್ಷಪಾಣಿನಿ, ಛಂದೋಬ್ರಹ್ಮ ಮುಂತಾದ ಗೌರವಗಳು ಸಿಕ್ಕಿದೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಂತಾಪ

(ಗಲ್ಫ್  ಕನ್ನಡಿಗ)‘ಯಕ್ಷಗಾನ ಛಂದೋಬ್ರಹ್ಮ’, ‘ಅಭಿನವ ನಾಗವರ್ಮ’ ಬಿರುದಾಂಕಿತ ಹಿರಿಯ ವಿದ್ವಾಂಸ ಡಾ. ಎನ್. ನಾರಾಯಣ ಶೆಟ್ಟಿ ಶಿಮಂತೂರು ಅವರ ನಿಧನ ಯಕ್ಷಗಾನ ಛಂದಸ್ಸು ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಶಿಮಂತೂರು ನಾರಾಯಣ ಶೆಟ್ಟಿ ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ, ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಕುಟುಂಬಿಕರಿಗೆ, ಶಿಷ್ಯರಿಗೆ ಭಗವಂತ ಕರುಣಿಸಲಿ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಸಂತಾಪ ವ್ಯಕ್ತಪಡಿಸಿದ್ದಾರೆ.
ಶಿಕ್ಷಕರಾಗಿ, ಯಕ್ಷಗಾನ ಛಂದಸ್ಸು ಕ್ಷೇತ್ರದ ಸಾಧಕನಾಗಿ, ಕವಿ, ವಿಮರ್ಶಕ, ಪ್ರಸಂಗಕರ್ತರಾಗಿ ಸಾಹಿತ್ಯ, ಯಕ್ಷಗಾನ ಕ್ಷೇತ್ರಕ್ಕೆ ನಾರಾಯಣ ಶೆಟ್ಟಿ ಅವರು ಅಪಾರ ಕೊಡುಗೆ ನೀಡಿದ್ದಾರೆ. ಯಕ್ಷಗಾನ ಛಂದೋಂಬುಧಿ ಎನ್ನುವ ತನ್ನ ಗ್ರಂಥದ ಮೂಲಕ ಶಿಮಂತೂರು ಅವರು ಅಜರಾಮರರಾಗಲಿದ್ದಾರೆ.  ‘ಕಟೀಲು ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಪ್ರಸಂಗವನ್ನು ಎಳವೆಯಲ್ಲಿಯೇ ರಚಿಸುವ ಮೂಲಕ ಶಿಮಂತೂರು ಅವರು ಪ್ರಖ್ಯಾತಿ ಪಡೆದವರು. ಅವರ ಅಗಲಿಕೆ ದುಖಃ ಉಂಟು ಮಾಡಿದೆ ಎಂದು ನಳಿನ್ ಕುಮಾರ್ ತಿಳಿಸಿದ್ದಾರೆ.

   (ಗಲ್ಫ್  ಕನ್ನಡಿಗ)

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99