-->

"ಮೇಲ್ಮನವಿ ಹಿಂಪಡೆಯಿರಿ, ಅಗ್ರಹಾರ ಕೃಷ್ಣಮೂರ್ತಿಗೆ ಸಲ್ಲಬೇಕಾದ ಎಲ್ಲ ಸೌಲಭ್ಯ ಕೊಡಿ"- ಹೀಗೆ ಹೇಳಿದ್ದು...

"ಮೇಲ್ಮನವಿ ಹಿಂಪಡೆಯಿರಿ, ಅಗ್ರಹಾರ ಕೃಷ್ಣಮೂರ್ತಿಗೆ ಸಲ್ಲಬೇಕಾದ ಎಲ್ಲ ಸೌಲಭ್ಯ ಕೊಡಿ"- ಹೀಗೆ ಹೇಳಿದ್ದು...


ಈ ಮಾತು ಹೇಳಿದ್ದು ದೆಹಲಿ ಜೆಎನ್‌ಯು ಕನ್ನಡ ಪೀಠದ ಜವಾಬ್ದಾರಿಯಿಂದ ಕೆಲ ದಿನಗಳ ಹಿಂದಷ್ಟೇ ನಿವೃತ್ತರಾದ ಪ್ರೊ. ಪುರುಷೋತ್ತಮ ಬಿಳಿಮಲೆ ಅವರು. ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಅವರು ಬರೆದ ಬರಹಗಳನ್ನು ಸುದ್ದಿಯ ಪ್ರಾಮುಖ್ಯತೆಯಿಂದಾಗಿ ನಮ್ಮ ಓದುಗರ ಜೊತೆ ನಾವು ಹಂಚುಕೊಳ್ಳುತ್ತಿದ್ದೇವೆ.

ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ

ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿಯಾಗಿ ಕೆಲಸ ಮಾಡಿ, ಎಂಟು ವರ್ಷಗಳ ಹಿಂದೆಯೇ ನಿವೃತ್ತರಾಗಿರುವ ಶ್ರೀ ಅಗ್ರಹಾರ ಕೃಷ್ಣಮೂರ್ತಿ (ಜನವರಿ 18, 1953)ಯವರು ನನ್ನ ಸ್ನೇಹವಲಯದಲ್ಲಿ ಇದ್ದವರಲ್ಲ. ನಾನು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷನಾಗಿದ್ದಾಗ ಸಂಘದಲ್ಲಿ ಒಂದೆರಡು ಬಾರಿ ಅತ್ಯುತ್ತಮವಾಗಿ ಅವರು ಭಾಷಣ ಮಾಡಿದ್ದರು. ಒಂದೇ ಒಂದು ಬಾರಿ ಅವರು ಅಕಾಡೆಮಿ ಕಾರ್ಯಕ್ರಮವೊಂದಕ್ಕೆ ನನ್ನನ್ನು ಕಳಿಸಿಕೊಟ್ಟಿದ್ದರು. ಅವರು ದೆಹಲಿ ಬಿಟ್ಟು ಹೊರಟಾಗ ಅವರಿಗೊಂದು ಬೀಳ್ಕೊಡುಗೆ ಕಾರ್ಯಕ್ರಮ ಏರ್ಪಡಿಸಿದ್ದೆವು. ಆ ದಿನ ಅವರು ಮನಬಿಚ್ಚಿ ಮಾತಾಡಿದ್ದರು. ತನ್ನ ಮೇಲೆ ಹೊರಿಸಲಾದ ಆರೋಪಗಳ ಬಗ್ಗೆ ಅವರು ಎಳೆ ಎಳೆಯಾಗಿ ಮಾತಾಡಿದಾಗ ನಾನು ಬೆಚ್ಚಿ ಬಿದ್ದಿದ್ದೆ.

ಅಗ್ರಹಾರ ನಿವೃತ್ತರಾಗುವ ಹೊತ್ತಿಗೆ ಅವರ ಮೇಲೆ ಹಣಕಾಸಿನ ದುರುಪಯೋಗದ ಆರೋಪ ಹೊರಿಸಿ, ನಿವೃತ್ತಿಯ ಸಂದರ್ಭದಲ್ಲಿ ಕೊಡಬೇಕಾಗಿದ್ದ ಎಲ್ಲ ಸವಲತ್ತುಗಳನ್ನೂ ತಡೆಹಿಡಿಯಲಾಗಿತ್ತು. ಅಗ್ರಹಾರರು ಕರ್ನಾಟಕದ ಉಚ್ಛ ನ್ಯಾಯಾಲಯದ ಮೊರೆ ಹೊಕ್ಕರು. ಸುದೀರ್ಘ ವಿಚಾರಣೆಯ ನಂತರ ಅವರ ಮೇಲಿದ್ದ ಎಲ್ಲ ಅರೋಪಗಳನ್ನೂ ನ್ಯಾಯಾಲಯ ತಳ್ಳಿಹಾಕಿತು. ವಿಷಯವನ್ನು ಇಲ್ಲಿಗೇ ಮುಗಿಸಿ, ಅಗ್ರಹಾರರಿಗೆ ಸಲ್ಲಬೇಕಾಗಿರುವ ನಿವೃತ್ತಿ ಸೌಲಭ್ಯಗಳನ್ನು ನೀಡಿ, ಅಕಾಡೆಮಿ ತನ್ನಲ್ಲಿಯೇ ಬಹಳ ಕಾಲ ಸೇವೆ ಸಲ್ಲಿಸಿದ ಲೇಖಕನೊಬ್ಬನಿಗೆ ಗೌರವ ನೀಡಿ ತನ್ನ ಘನತೆಯನ್ನು ಉಳಿಸಿಕೊಳ್ಳಬಹುದಾಗಿತ್ತು. ಆದರೆ ಹಾಗೆ ಆಗಲೇ ಇಲ್ಲ. ಕನ್ನಡದವರೇ ಆಗಿರುವ ಡಾ. ಚಂದ್ರಶೇಖರ ಕಂಬಾರರು ಅಧ್ಯಕ್ಷರಾಗಿರುವ ಅಕಾಡೆಮಿಯು ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿ ಅಗ್ರಹಾರರ ಬಗೆಗಣ ತನ್ನ ದ್ವೇಷವನ್ನು ಮುಂದುವರಿಸಿದೆ. ಈ ಕುರಿತು ಕನ್ನಡದ ಅನೇಕ ಲೇಖಕರು ಸಲ್ಲಿಸಿದ ಮನವಿಯನ್ನು ಡಾ. ಕಂಬಾರರು ಪುರಸ್ಕರಿಸಲೇ ಇಲ್ಲ. ಒಂದು ಕಾಲದಲ್ಲಿ ಅಗ್ರಹಾರರನ್ನು ವಿರೋಧಿಸಿದವರೂ ಕೂಡಾ ಅಗ್ರಹಾರರಿಗೆ ನ್ಯಾಯ ಕೊಡಿ ಎಂದು ಬಹಿರಂಗ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಈ ನಡುವೆ ಅಗ್ರಹಾರರು ಅನುಭವಿಸಿದ ದೈಹಿಕ ಮಾನಸಿಕ ಕಷ್ಟಗಳ ಕುರಿತು ಅವರನ್ನು ಹತ್ತಿರದಿಂದ ಬಲ್ಲವರು ನೋವಿನಿಂದ ವಿವರಿಸುತ್ತಾರೆ.

ಕನ್ನಡದ ಪ್ರಮುಖ ಲೇಖಕರಲ್ಲಿ ಒಬ್ಬರಾದ ಕೃಷ್ಣಮೂರ್ತಿ ಅವರ ವಿಶ್ರಾಂತ ಬದುಕಿನಲ್ಲಿ ಹೀಗಾಗಿದ್ದು ಅತ್ಯಂತ ವಿಷಾದದ ಸಂಗತಿ.

ಕಂಬಾರರನ್ನು ನಾನು ಹತ್ತಿರದಿಂದ ಬಲ್ಲೆ. ಅವರು ತಮ್ಮ ಬಿಗಿ ಪಟ್ಟುಗಳನ್ನು ಸುಲಭವಾಗಿ ಸಡಿಸಲಾರರು. ಅವರ ಜೊತೆಗೆ ಇರುವ ಕವಿ ಸಿದ್ದಲಿಂಗಯ್ಯನವರ ಪಟ್ಟುಗಳನ್ನು ಅರ್ಥಮಾಡಿಕೊಳ್ಳುವುದೇ ಕಷ್ಟ. ಇದು ಗೊತ್ತಿದ್ದೂ ನಾನು ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ- ‘ ನ್ಯಾಯಾಲದ ತೀರ್ಪನ್ನು ಗೌರವಿಸಿ, ದ್ವೇಷ ಬಿಟ್ಟು ಮೇಲ್ಮನವಿಯನ್ನು ಹಿಂಪಡೆದು ಅಗ್ರಹಾರ ಕೃಷ್ಣಮೂರ್ತಿ ಅವರಿಗೆ ಸಲ್ಲಬೇಕಾದ ಎಲ್ಲಾ ಸೌಲಭ್ಯಗಳನ್ನು ದಯವಿಟ್ಟು ಕೂಡಲೇ ಕೊಡಿರಿ’, ಇದರಿಂದ ನಿಮ್ಮ ಘನತೆ ಹೆಚ್ಚುತ್ತದೆ’ .


Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99