ಮೂವರು ಲಂಚಕೋರ ಅಧಿಕಾರಿಗಳು ACB ಪೊಲೀಸರ ಬಲೆಗೆ
Saturday, August 29, 2020
(ಗಲ್ಫ್ ಕನ್ನಡಿಗ)ಬೆಂಗಳೂರು: ಎಸಿಬಿ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಮೂವರು ಭ್ರಷ್ಟ, ಲಂಚಕೋರ ಅಧಿಕಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧಿಕಾರಿಗಳು ಬಂಧಿತರು. ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಧಿಕಾರಿಗಳು, ಈ ನಿಗಮದ ಮೂವರು ಅಧಿಕಾರಿಗಳನ್ನು ಬಂಧಿಸಿದ್ದಾರೆ.
(ಗಲ್ಫ್ ಕನ್ನಡಿಗ)ನಿಗಮದ ಪ್ರಧಾನ ವ್ಯವಸ್ಥಾಪಕ ನಾಗೇಶ್, ಸಹಾಯಕ ಪ್ರಧಾನ ವ್ಯವಸ್ಥಾಪಕಿ ಮಂಜುಳಾ ಮತ್ತು ವ್ಯವಸ್ಥಾಪಕ ಸುಬ್ಬಯ್ಯ ಬಂಧಿತರು. ಬಡ ಪ.ಪಂಗಡದ ಭೂರಹಿತ ರೈತರಿಗೆ ಸರ್ಕಾರದಿಂದಭೂಮಿ ಖರೀದಿಸಿ ನೀಡುವ ಯೋಜನೆಯನ್ನು ವಾಲ್ಮೀಕಿ ನಿಗಮವು ಭೂ ಒಡೆತನ ಯೋಜನೆ ಮೂಲಕ ಮಾಡುತ್ತಿದೆ. ಈ ಯೋಜನೆಯಲ್ಲಿ ಅಕ್ರಮ ನಡೆಯುತ್ತಿದ್ದು, ಕಡಿಮೆ ಗುಣಮಟ್ಟ ಮತ್ತು ಕಡಿಮೆ ಬೆಲೆಯ ಭೂಮಿಯನ್ನು ಹೆಚ್ಚಿನ ಬೆಲೆಗೆ ಖಾಸಗಿ ಭೂ ಮಾಲೀಕರಿಂದ ಪ್ರತಿ ಎಕರೆಗೆ 4 ರಿಂದ 5 ಲಕ್ಷ ರೂ. ಬೆಲೆಗೆ ಖರೀದಿಸುತ್ತಿರುವ ಮಾಹಿತಿ ಇತ್ತು. ಈ ಮೂಲಕ ಬರುತ್ತಿದ್ದ ಹೆಚ್ಚುವರಿ ಹಣವನ್ನು ಮಧ್ಯವರ್ತಿಗಳು ಮತ್ತು ಅಧಿಕಾರಿಗಳು ಹಂಚಿಕೊಳ್ಳುತ್ತಿದ್ದಾರೆ. ಈ ರೀತಿಯ ಭೂ ಒಡೆತನ ಯೋಜನೆಯ ಒಂದು ಪ್ರಕರಣದಲ್ಲಿ ಮಾರ್ಚ್ ತಿಂಗಳ ದಿನಾಂಕ ಉಲ್ಲೇಖೀಸಿ ಕೆಲವು ಜಿಲ್ಲೆಗಳಿಗೆ ಹಣವನ್ನು ಬಿಡುಗಡೆ ಮಾಡಲು ಕಡತ ಸಿದ್ಧವಾಗಿತ್ತು. ಬಿಡುಗಡೆಯಾಗುವ ಮೊತ್ತದಲ್ಲಿ ಲಂಚದ ಹಣವನ್ನು ಕಚೇರಿಯ ವ್ಯವಸ್ಥಾಪಕ ಸುಬ್ಬಯ್ಯ ಪಡೆದುಕೊಂಡು, ಬಳಿಕ ಪ್ರಧಾನ ವ್ಯವಸ್ಥಾಪಕ ನಾಗೇಶ್ ಗೆ ತಲುಪಿಸಿದ್ದರು.
(ಗಲ್ಫ್ ಕನ್ನಡಿಗ)ಈ ಹಿನ್ನೆಲೆಯಲ್ಲಿ ಕಚೇರಿಯ ಮೇಲೆ ಆಗಸ್ಟ್ 27ರಂದು ದಾಳಿ ನಡೆಸಲಾಗಿತ್ತು. ಈ ವೇಳೆ ಲೆಕ್ಕವಿಲ್ಲದ 22 ಲಕ್ಷ ರೂ. ನಗದು ಪತ್ತೆಯಾಗಿದೆ. ನಂತರ ನಾಗೇಶ್ ಅವರ ಮನೆಯನ್ನು ಶೋಧಿಸಿದಾಗ 32,50 ಲಕ್ಷ ರೂ. ನಗದು ಹಣ ಮತ್ತು ಸುಬ್ಬಯ್ಯ ಮನೆಯಲ್ಲಿ 27,50 ಲಕ್ಷ ರೂ. ಪತ್ತೆಯಾಗಿದೆ. ಒಟ್ಟು 82, 65 ಲಕ್ಷ ರೂ. ಲಂಚದ ಹಣ ವಶಕ್ಕೆ ಪಡೆಯಲಾಗಿದೆ. ಈ ಹಿನ್ನೆಲೆಯಲ್ಲಿ ಮೂವರನ್ನು ಬಂಧಿಸಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ವಿಚಾರಣೆ ನಡೆಯುತ್ತಿದೆ.
(ಗಲ್ಫ್ ಕನ್ನಡಿಗ)