ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನ ದ.ಕ. ಜಿಲ್ಲಾ ಗೌರವಾಧ್ಯಕ್ಷರಾಗಿ ಡಾ.ಮೋಹನ್ ಆಳ್ವ
Saturday, August 29, 2020
(ಗಲ್ಫ್ ಕನ್ನಡಿಗ)ಮಂಗಳೂರು:ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನ ದಕ್ಷಿಣ ಕನ್ನಡ ಜಿಲ್ಲಾ ಗೌರವಾಧ್ಯಕ್ಷರಾಗಿ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರು, ಕರಾವಳಿ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಗಳೂ ಆಗಿರುವ ಡಾ.ಎಂ.ಮೋಹನ್ ಆಳ್ವ ಅವರನ್ನು ಆಯ್ಕೆ ಮಾಡಲಾಗಿದೆ.
(ಗಲ್ಫ್ ಕನ್ನಡಿಗ)ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು 1966 ರಲ್ಲಿ ರತ್ನಸಿಂಹ ಶಾಂಡಿಲ್ಯ ಅವರ ನೇತೃತ್ವದಲ್ಲಿ ದಿಲ್ಲಿಯಲ್ಲಿ ಉದ್ಘಾಟನೆಗೊಳ್ಳುವ ಮೂಲಕ ಆರಂಭವಾಯಿತು. 2015 ರಿಂದ ಸಾಹಿತ್ಯಿಕ ದೃಷ್ಟಿಯಿಂದ ಕರ್ನಾಟಕ ರಾಜ್ಯದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆಗಳಲ್ಲಿ ಮುಖ್ಯವೆನಿಸಿದೆ. ಭಾಷೆ ನಾಗರಿಕತೆಯ ಪ್ರತೀಕವಾದರೆ ಸಾಹಿತ್ಯ ಸಂಸ್ಕೃತಿಯ ಪ್ರತಿಬಿಂಬ. ಆತ್ಮಶೋಧನೆಯ ಮೂಲಕ ಸಾಧನೆಗೆ ದಾರಿದೀಪವೆನಿಸಿದ್ದು ಸಾಹಿತ್ಯ. ಓದು ಮನುಷ್ಯನ ಒಳಗೊಬ್ಬ ಸಾಹಸಿಯನ್ನು ಸೃಷ್ಟಿಸುತ್ತದೆ ಆ ಸಾಹಸದಿಂದ ಸಂಸ್ಕೃತಿ ಮತ್ತು ತಾಯಿನೆಲದ ರಕ್ಷಣೆ ಸಾಧ್ಯವಾಗುತ್ತದೆ ಎಂಬ ನಂಬಿಕೆ ಅಭಾಸಾಪ ಸಂಘಟನೆಯದ್ದು.
ಹೀಗಾಗಿಯೇ ಎಲ್ಲ ಭಾರತೀಯ ಭಾಷೆಗಳ ಒಳಗಿರುವ ಭಾರತೀಯತೆಯನ್ನು ಜಾಗೃತಗೊಳಿಸುವ ಮೂಲಕ ಅವಾಸ್ತವಿಕ ವೈಚಾರಿಕತೆಯನ್ನು ಎದುರಿಸುತ್ತ ಅಖಂಡ ಭಾರತವನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಸಂಘಟನೆ ಕಾರ್ಯ ನಿರ್ವಹಿಸುತ್ತದೆ. ಸಂಘಟನೆಯ ಕಾರ್ಯವ್ಯಾಪ್ತಿಯು ಘಟಕಗಳು ಹಾಗು ಸಮಿತಿಗಳೆಂಬ ರೂಪಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.
(ಗಲ್ಫ್ ಕನ್ನಡಿಗ) ಸಾಹಿತ್ಯಕ ಚಟುವಟಿಕೆಗಳನ್ನು ನಡೆಸುತ್ತಾ, ಸೃಜನಶೀಲತೆಯ ವ್ಯಕ್ತಿ ಹಾಗು ವ್ಯಕ್ತಿತ್ವವನ್ನು, ಸಂವೇದನಾಶೀಲ ಸದೃಢ ಸಮಾಜವನ್ನು ಸೃಷ್ಟಿಸುವ ಗರಿಷ್ಠ 25 ಸದಸ್ಯರನ್ನು ಹೊಂದಿರುವ ಗುಂಪುಗಳು 'ಘಟಕ'ಗಳಾಗಿ ಕಾರ್ಯನಿರ್ವಹಿಸುತ್ತವೆ.
ಅಂತೆಯೇ, ಸಾಹಿತ್ಯಕ ಅಪಸವ್ಯಗಳಿಂದ ಮುಕ್ತಗೊಳ್ಳುತ್ತ ಪ್ರಾದೇಶಿಕ ಭಾಷೆ ಹಾಗು ಸಾಹಿತ್ಯ ಸಂಸ್ಕೃತಿಯ ಅಧ್ಯಯನದ ಮುಖಾಂತರ ಓದುಗ ಬರಹಗಾರರ ಕೊಂಡಿಯಂತೆಯೂ, ಭಾರತದ ಭವಿಷ್ಯವೆನಿಸಿದ ಮುಂದಿನ ಪೀಳಿಗೆಯನ್ನು ಸಶಕ್ತ ಭಾರತದ ನಿರ್ಮಾಣ ಕಾರ್ಯದಲ್ಲಿ ಸಿದ್ಧಗೊಳಿಸುವುದು ಸೇರಿದಂತೆ ಸಾಹಿತ್ಯದ ಹಲವಾರು ಕಾರ್ಯಕ್ರಮಗಳ ಆಯೋಜನೆಗಾಗಿ ತಾಲೂಕು, ಜಿಲ್ಲೆ ಹಾಗು ರಾಜ್ಯ ಸಮಿತಿಗಳು ಆಯಾಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತವೆ.
ಪ್ರಸ್ತುತ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ತನ್ನ ಕಾರ್ಯಯೋಜನೆಯನ್ನು ವಿಸ್ತರಿಸಿಕೊಳ್ಳುತ್ತಿರುವ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನ ದಕ್ಷಿಣ ಕನ್ನಡ ಜಿಲ್ಲಾ ಗೌರವಾಧ್ಯಕ್ಷರಾಗಿ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರು, ಕರಾವಳಿ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಗಳೂ ಆಗಿರುವ ಡಾ.ಎಂ.ಮೋಹನ್ ಆಳ್ವ ಅವರನ್ನು ಆಯ್ಕೆ ಮಾಡಲಾಯಿತು.
(ಗಲ್ಫ್ ಕನ್ನಡಿಗ)ಜಿಲ್ಲಾಧ್ಯಕ್ಷರಾಗಿ ಹಿರಿಯ ಲೇಖಕ, ಸಮಾಜಶಾಸ್ತ್ರಜ್ಞ ಮತ್ತು ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಸಿ ಎನ್ ಶಂಕರರಾವ್ ಅವರನ್ನು ನಿಯುಕ್ತಿಗೊಳಿಸಲಾಯಿತು. ಅದೇ ರೀತಿ ಜಿಲ್ಲಾ ಕಾರ್ಯದರ್ಶಿಯಾಗಿ ಸಾಮಾಜಿಕ ಕಾರ್ಯಕರ್ತರು ಹಾಗು ಮುಂಡಾಜೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷರೂ ಆಗಿರುವ ಪ್ರಕಾಶ್ ನಾರಾಯಣ ಚಾರ್ಮಾಡಿ ಹಾಗು ಕೋಶಾಧಿಕಾರಿಗಳಾಗಿ ಮಂಗಳೂರಿನ ಉದ್ಯಮಿ ಮಾಧವ ಜೋಗಿತ್ತಾಯ ಅವರನ್ನು ಅಭಾಸಾಪದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ರಘುನಂದನ್ ಭಟ್ ನರೂರ್ ಅವರು ಘೋಷಿಸಿದರು.