ರಿಟೇಲ್ ಲೈಸನ್ಸ್ ನಲ್ಲಿ ಹೋಲ್‍ಸೇಲ್ ವ್ಯಾಪಾರ ಮಾಡಿದರೆ ಕಠಿಣ ಕ್ರಮ; ದ.ಕ ಜಿಲ್ಲಾಧಿಕಾರಿ ಎಚ್ಚರಿಕೆ dc
Saturday, August 29, 2020
ಮಂಗಳೂರು; ಕೆಲವು ವ್ಯಾಪಾರಿಗಳು ರಿಟೇಲ್ ವ್ಯಾಪಾರಕ್ಕೆ ಪರವಾನಿಗೆ ಪಡೆದು, ಹೋಲ್‍ಸೇಲ್ ವ್ಯವಹಾರ ಮಾಡುತ್ತಿರುವ ಮಾಹಿತಿ ಇದ್ದು, ಅಂತಹ ವ್ಯಾಪಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ ದ.ಕ ಜಿಲ್ಲಾಧಿಕಾರಿ ಡಾ ಕೆ ವಿ ಜಗದೀಶ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅವರು ಎಪಿಎಂಸಿ ಪ್ರಾಂಗಣದಲ್ಲಿ ನಡೆದ ವರ್ತಕರ ಹಾಗೂ ಜನಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಂದಿನ ದಿನಗಳಲ್ಲಿ ಯಾವುದೇ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಬೇಕಿದ್ದರೆ, ಎಪಿಎಂಸಿ ಪರವಾನಿಗೆ ಪಡೆದ ನಂತರವೇ ಮಹಾನಗರಪಾಲಿಕೆ ಅಥವಾ ಸ್ಥಳೀಯ ಸಂಸ್ಥೆಗಳು ಅನುಮತಿ ನೀಡಬೇಕು . ಮಂಗಳೂರು ನಗರದಲ್ಲಿ ಇಂತಹ ವ್ಯಾಪಾರ ಮಾಡುತ್ತಿರುವವರನ್ನು ಮಹಾನಗರಪಾಲಿಕೆ ಅಧಿಕಾರಿಗಳು ಪತ್ತೆ ಹಚ್ಚಬೇಕು. ಇದಕ್ಕಾಗಿ ವಿಚಕ್ಷಣಾ ತಂಡವನ್ನು ರಚಿಸುವಂತೆ ಅವರು ಮಹಾನಗರಪಾಲಿಕೆ ಆಯುಕ್ತರಿಗೆ ನಿರ್ದೇಶಿಸಿದರು.
ಬೈಕಂಪಾಡಿ ಎಪಿಎಂಸಿ ಮಾರುಕಟ್ಟೆಯಲ್ಲಿ ಅತ್ಯಾಧುನಿಕ ಮಟ್ಟದ ಸೌಲಭ್ಯಗಳನ್ನು ಒದಗಿಸಿ ಇದನ್ನು ಪರಿಪೂರ್ಣ ಮಾರುಕಟ್ಟೆಯನ್ನಾಗಿ ಮಾಡಲಾಗುವುದು .ಎಪಿಎಂಸಿ ಪ್ರಾಂಗಣದಲ್ಲಿ ಈಗಾಗಲೇ ಸಮಿತಿ ವತಿಯಿಂದ ಎಲ್ಲಾ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೋಲ್ಡ್ ಸ್ಟೋರೇಜ್, ಹಣ್ಣುಗಳನ್ನು ಶೇಖರಿಸಿಡುವ ಗೋದಾಮು ಸೇರಿದಂತೆ ಹಣ್ಣು, ತರಕಾರಿ ವ್ಯವಹಾರಕ್ಕೆ ಪೂರಕವಾದ ಎಲ್ಲ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸುವಂತೆ ಅವರು ಸೂಚಿಸಿದರು.
ಬೈಕಂಪಾಡಿ ಎಪಿಎಂಸಿ ಪ್ರಾಂಗಣದಲ್ಲಿ ಕೈಗೊಳ್ಳಬೇಕಾದ ತುರ್ತು ಹಾಗೂ ಮೂಲಸೌಕರ್ಯ ಕಾಮಗಾರಿಗಳ ಬಗ್ಗೆ ಲೋಕೋಪಯೋಗಿ ಇಲಾಖೆ ಜತೆಗೂಡಿ, ಯೋಜನಾ ವರದಿ ಸಿದ್ಧಪಡಿಸುವಂತೆ ತಿಳಿಸಿದ ಅವರು ಸ್ಮಾರ್ಟ್ ಸಿಟಿ, ನಗರಾಭಿವೃದ್ಧಿ ಪ್ರಾಧಿಕಾರ, ಕೇಂದ್ರ ತೋಟಗಾರಿಕಾ ಮಿಷನ್ ಸೇರಿದಂತೆ ವಿವಿಧ ಇಲಾಖೆಗಳ ಅನುದಾನದಿಂದ ಎಪಿಎಂಸಿ ಪ್ರಾಂಗಣದಲ್ಲಿ ಉನ್ನತ ಮಟ್ಟದ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸಲಾಗುವುದು. ಮುಂದಿನ ದಿನಗಳಲ್ಲಿ ಮಂಗಳೂರಿನ ಎಲ್ಲಾ ರೀತಿಯ ಹೋಲ್‍ಸೇಲ್ ವ್ಯಾಪಾರಗಳನ್ನು ಎಪಿಎಂಸಿ ಪ್ರಾಂಗಣಕ್ಕೆ ತರಲಾಗುವುದು ಎಂದರು.
ಮಂಗಳೂರು ಸೆಂಟ್ರಲ್ ಮಾರುಕಟ್ಟೆಯಿಂದ ಸ್ಥಳಾಂತರಗೊಂಡ 44 ಪರವಾನಿಗೆದಾರರಿಗೆ ಮಳಿಗೆ ಹಂಚಿಕೆಯಲ್ಲಿ ಆದ್ಯತೆ ನೀಡಲಾಗಿದೆ. ಇವರ ಬೇಡಿಕೆಗಳಿಗೆ ಎಪಿಎಂಸಿ ಸೂಕ್ತವಾಗಿ ಸ್ಪಂದಿಸುತ್ತಿದೆ. ಯಾವುದೇ ವ್ಯವಹಾರಗಳಿಗೆ ತೊಂದರೆ ಕೊಡುವುದು ಜಿಲ್ಲಾಡಳಿತದ ಉದ್ದೇಶವಲ್ಲ ಎಂದು ತಿಳಿಸಿದರು.
ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಸ್ಥರಿಗೆ ಯಾವುದೇ ತೊಂದರೆಯಾಗದಂತೆ ಗಮನಹರಿಸಲಾಗುವುದು. ಸ್ಥಳಾಂತರ ನಂತರ ಎಪಿಎಂಸಿ ಪ್ರಾಂಗಣದಲ್ಲಿ ಈಗಾಗಲೇ ಒಂದು ಕೋಟಿ ರೂ. ಗೂ ಅಧಿಕ ಮೊತ್ತದ ಮೂಲಸೌಕರ್ಯ ಕಾಮಗಾರಿ ನಡೆಸಲಾಗಿದೆ. ಟ್ರಾಫಿಕ್ ಪೊಲೀಸ್ ಮಾಹಿತಿಯಂತೆ ಸೆಂಟ್ರಲ್ ಮಾರುಕಟ್ಟೆಗೆ ಪ್ರತೀದಿನ 1000ಕ್ಕೂ ಮಿಕ್ಕಿ ವಾಹನಗಳು ಬರುತ್ತಿದ್ದು, ಮಾರುಕಟಟೆ ಸ್ಥಳಾಂತರದ ನಂತರ ನಗರದಲ್ಲಿ ವಾಹನ ಸಂಚಾರ ಸಮಸ್ಯೆ ಗಣನೀಯವಾಗಿ ತಗ್ಗಿದೆ ಎಂದರು.
ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ತಮ್ಮಿಚ್ಚೆಯ ಸ್ಥಳದಲ್ಲಿ ಮಾರಾಟ ಮಾಡಲು ಅವಕಾಶ ನೀಡುತ್ತದೆಯೇ ಹೊರತು, ಮಾರಾಟಗಾರರಿಗೆ ಎಪಿಎಂಸಿ ಪ್ರಾಂಗಣದ ಹೊರಗಡೆ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ನೀಡಿಲ್ಲ. ವರ್ತಕರಿಗೆ ಎಪಿಎಂಸಿ ಕಾಯ್ದೆಯೇ ಅನ್ವಯವಾಗುತ್ತದೆ. ಅಧಿಸೂಚಿತ ಪ್ರದೇಶದ ಹೊರಗಡೆ ರಖಂ ವ್ಯಾಪಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಮಹಾನಗರಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
ಎಪಿಎಂಸಿ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ ಮಾತನಾಡಿ, ಎಪಿಎಂಸಿ ಪ್ರಾಂಗಣದಲ್ಲಿ 10 ವರ್ಷಗಳ ಕಾಲ ನಿಯಮಾನುಸಾರ ವ್ಯಾಪಾರ ಮಾಡಿದವರಿಗೆ ಮಳಿಗೆಗಳನ್ನು ಮಾಲೀಕತ್ವದಲ್ಲಿ ನೀಡಲಾಗುವುದು. ವರ್ತಕರ ಎಲ್ಲಾ ಬೇಡಿಕೆಗಳಿಗೆ ಪೂರಕವಾಗಿ ಸ್ಪಂದಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ, ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಮೇಯರ್ ದಿವಾಕರ್, ಉಪಮೇಯರ್ ವೇದಾವತಿ, ಮಹಾನಗರಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಮೂಡಾ ಆಯುಕ್ತ ದಿನೇಶ್ ಕುಮಾರ್, ಸ್ಮಾರ್ಟ್‍ಸಿಟಿ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ನಝೀರ್, ಎಪಿಎಂಸಿ ವರ್ತಕರ ಸಂಘದ ಮುಖಂಡರಾದ ಭರತ್‍ರಾಜ್, ಬಿ.ಕೆ. ಇಂತಿಯಾಝ್ ಮತ್ತಿತರರು ಉಪಸ್ಥಿತರಿದ್ದರು.