ತುಮಕೂರು: ಕನ್ನಡದಲ್ಲಿ 99 ಅಂಕಗಳನ್ನು ಪಡೆದ ದುಬೈ ವಿದ್ಯಾರ್ಥಿ.....

ತುಮಕೂರು: ಕನ್ನಡದಲ್ಲಿ 99 ಅಂಕಗಳನ್ನು ಪಡೆದ ದುಬೈ ವಿದ್ಯಾರ್ಥಿ.....

 2019-20ನೇ ಸಾಲಿನ ಎಸ್.ಎಸ್.ಎಲ್.ಸಿ.  ಪರೀಕ್ಷೆಯಲ್ಲಿ ತುಮಕೂರಿನ ಸೇಕ್ರೆಡ್ ಹಾರ್ಟ್ ಶಾಲೆಗೆ ಪ್ರತಿ ವರ್ಷದಂತೆ ಶೇ. 100ರಷ್ಟು ಫಲಿತಾಂಶ ಲಭಿಸಿದೆ. 28ನೇ ವರ್ಷದ ಸಂಭ್ರಮಾಚರಣೆ ಆಚರಿಸುತ್ತಿರುವ ಸೇಕ್ರೆಡ್ ಹಾರ್ಟ್ ಶಾಲೆಗೆ ಈ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶವು ಹಲವು ವೈಶಿಷ್ಟ್ಯತೆಯಿಂದ ಕೂಡಿದೆ.

 ಸೈಯದ್ ಮುಷಾಹಿದ್ ಎಂಬ ವಿದ್ಯಾರ್ಥಿಯು ದೂರದ ದುಬೈನಿಂದ ಬಂದು ಕೇವಲ ಎರಡೇ ವರ್ಷಗಳಲ್ಲಿ ಕನ್ನಡ ಮಾತನಾಡುವುದನ್ನು ಕಲಿತು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕನ್ನಡದಲ್ಲಿ 99 ಅಂಕಗಳನ್ನು ಪಡೆದಿದ್ದಾನೆ. ಈತನು ಯು.ಎ.ಇ. ದೇಶದ ಅಜ್ಮನ್ ರಾಜ್ಯದ ಜರ್ಫ್ ಪ್ರಾಂತ್ಯದ ಹ್ಯಾಬಿಟೇಷನ್ ಇಂಟರ್‍ನ್ಯಾಷನಲ್ ಸ್ಕೂಲ್‍ನಲ್ಲಿ ಮೊದಲು ವ್ಯಾಸಂಗ ಮಾಡುತ್ತಿದ್ದರು. ಇವರ ತಂದೆ ಸೈಯದ್ ಮನ್ಸೂರ್ ಮಜರ್‍ರವರು ದುಬೈನ ಗಲ್ಫ್ ಫೀಡ್ ಮಿಲ್‍ನಲ್ಲಿ ಶಿಪ್ಟ್ ಸೂಪರ್‍ವೈಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ತಾಯಿ ಸೈಯೆದಾ ಅಸ್ಮಾ ಕಾನಮ್‍ರವರ ಅನಿಸಿಕೆಯಂತೆ ಶಾಲೆಯ ಶಿಕ್ಷಕರ ಶಿಸ್ತಿನ ಬೋಧನೆ ಮತ್ತು ಶಾಲೆಯ ಸಂಸ್ಥಾಪಕರಾದ ಡಾ. ಲ್ಯಾನ್ಸಿ ಹೆಚ್.ಪಾಯ್ಸ್ ಮತ್ತು ಕಾರ್ಯದರ್ಶಿಗಳಾದ  ಸುಜಯ್ ಪಾಯ್ಸ್‍ರವರ ಸತತ ಪ್ರೋತ್ಸಾಹದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದಿದ್ದಾರೆ.

   ಎರಡು ವರ್ಷಗಳ ಹಿಂದೆ ಭಾರತಕ್ಕೆ ಬಂದ ಈ ವಿದ್ಯಾರ್ಥಿಗೆ ಸರಿಯಾಗಿ ಕನ್ನಡ ಭಾಷೆ ಮಾತನಾಡಲು ಬರುತ್ತಿರಲಿಲ್ಲ. ಇವರಿಗೆ ಕನ್ನಡ ಗೊತ್ತಿಲ್ಲದ ಕಾರಣ ಶಾಲಾ ದಾಖಲಾತಿ ಮಾಡಲು ಕಷ್ಟಕರವಾಯಿತು. ಆ ಸಂದರ್ಭದಲ್ಲಿ ಸೇಕ್ರೆಡ್ ಹಾರ್ಟ್ ಶಾಲೆಯ ಸಂಸ್ಥಾಪಕರಾದ ಡಾ. ಲ್ಯಾನ್ಸಿ ಹೆಚ್.ಪಾಯ್ಸ್‍ರವರು ತಮ್ಮ ಸಂಸ್ಥೆಯ ಪ್ರೌಢಶಾಲೆಗೆ ದಾಖಲಿಸಿಕೊಂಡು ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟರು. ಈ ವಿದ್ಯಾರ್ಥಿಗೆ ಕನ್ನಡ ಭಾಷೆ ಗೊತ್ತಿಲ್ಲದ ಕಾರಣ ಆಂಗ್ಲಭಾಷೆ ಮತ್ತು ಹಿಂದಿ ಭಾಷೆಯ ಮುಖಾಂತರ ಕನ್ನಡ ಭಾಷೆಯನ್ನು ಹೇಳಿಕೊಡಲಾಯಿತು ಮತ್ತು ಈ ವಿದ್ಯಾರ್ಥಿಗೆ ಪ್ರತ್ಯೇಕವಾಗಿ ಶಿಕ್ಷಕರನ್ನು ನೇಮಿಸಿ, ಇವರ ಶೈಕ್ಷಣಿಕ ಪ್ರಗತಿಯ ಬಗ್ಗೆ ವರದಿಯನ್ನು ನಿರಂತರವಾಗಿ ಸಂಸ್ಥೆಯ ಅಧ್ಯಕ್ಷರಿಗೆ ಮಾಹಿತಿ ನೀಡಲಾಗುತ್ತಿತ್ತು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಘಟಕದ ಸದಸ್ಯರಾದ ಶ್ರೀ ಸುಜಯ್ ಪಾಯ್ಸ್‍ರವರು ಸೇಕ್ರೆಡ್ ಹಾರ್ಟ್ ಶಾಲೆಗೆ ಹೊರದೇಶದಿಂದ ಬಂದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದು, ಕನ್ನಡ ಭಾಷೆಯನ್ನು ಅತಿ ಸುಲಭವಾಗಿ ಕಲಿಯಲು ಹೊಸಮಾರ್ಗಗಳನ್ನು ಅಳವಡಿಸಿ, ನೃತ್ಯದ ಮುಖಾಂತರ ಹೇಳಿಕೊಡುವ ಹೊಸ ಪ್ರಯತ್ನದಿಂದ ಕನ್ನಡ ಬಾರದ ವಿದ್ಯಾರ್ಥಿಗಳಿಗೆ ಕನ್ನಡವನ್ನು ಸರಳವಾಗಿ ಕಲಿಯಲು ಅನುಕೂಲ ಮಾಡಿಕೊಡಲಾಗುತ್ತಿದೆ. ದೂರದ ದುಬೈ ದೇಶದಿಂದ ತುಮಕೂರಿಗೆ ಬಂದು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸೈಯದ್ ಮುಶಾಹಿದ್ ವಿದ್ಯಾರ್ಥಿಯ ಸಾಧನೆಯು ನಿಜಕ್ಕೂ ಒಂದು ಹೆಮ್ಮೆಯ ವಿಷಯವಾಗಿದೆ.

   ಡಾ. ಲ್ಯಾನ್ಸಿ ಹೆಚ್. ಪಾಯ್ಸ್‍ರವರ ಪ್ರಕಾರ, “ಕನ್ನಡ ಕಲಿಕೆಯು ನಿಜವಾಗಿಯೂ ಒಂದು ಸಂಭ್ರಮಾಚರಣೆ” ಎಂದು ಕನ್ನಡ ಭಾಷೆ ಅರಿಯದ ಈ ವಿದ್ಯಾರ್ಥಿಯ ಕನ್ನಡ ಸಾಧನೆಯ ಮುಖಾಂತರ ಸೇಕ್ರೆಡ್ ಹಾರ್ಟ್ ಶಾಲೆಯು ಮತ್ತೆ ಸಾಬೀತುಪಡಿಸಿದೆ ಎಂದಿದ್ದಾರೆ.