
ಕೊವಿಡ್-19 ವದಂತಿಗಳಿಗೆ ಕಿವಿಗೊಡದೇ ಸ್ವ-ಪ್ರೇರಣೆಯಿಂದ ತಪಾಸಣೆಗೆ ಮುಂದಾಗಿ : ಉ.ಕ ಜಿಲ್ಲಾಧಿಕಾರಿ
ಕಾರವಾರ : ಅಂತರ ರಾಜ್ಯ ಸಂಚಾರವನ್ನು ಸುಗಮಗೊಳಿಸಿರುವುದರಿಂದ ಜನರ ಓಡಾಟವು ಹೆಚ್ಚಿನ ಮಟ್ಟದಲ್ಲಿ ಕಂಡುಬರುವುದು ಸಹಜವಾಗಿದ್ದು, ಸಾರ್ವಜನಿಕರು ಸ್ವ-ಪ್ರೇರಣೆಯಿಂದ ಗಂಟಲು ದ್ರವ ಮಾದರಿ ಪರೀಕ್ಷೆಗೆ ಮುಂದಾಗಬೇಕೆಂದು ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಕೆ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಜನರು ಕೋವಿಡ್-19 ತಪಾಸಣೆಗೆ ಒಳಪಡದೆ ಹಿಂಜರಿದು ಸಾಕಷ್ಟು ತಪ್ಪು ಕಲ್ಪನೆಗಳಿಗೆ ಒಳಗಾಗಿದ್ದು, ತಪಾಸಣೆಗೆ ಹೋದವರಿಗೆಲ್ಲರಿಗೂ ಪಾಸಿಟಿವ್ ವರದಿ ನೀಡಲಾಗುತ್ತಿದೆ. ಹೆಚ್ಚು ಪಾಸಿಟಿವ್ ಪ್ರಕರಣಗಳನ್ನು ದಾಖಲು ಮಾಡಿದರೆ ಅಧಿಕಾರಿಗಳಿಗೆ ಹಣ ಸಿಗುತ್ತದೆ ಎಂಬ ವದಂತಿ ಹಬ್ಬಿದ್ದು, ಇದು ಸುಳ್ಳಿನಿಂದ ಕೂಡಿದೆ. ತಪಾಸಣೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಯಾವ ತಪಾಸಣೆಗೂ ಸರ್ಕಾರದಿಂದ ಹಣ ನೀಡಲಾಗುವುದಿಲ್ಲ. ಇಂತಹ ಸುಳ್ಳು ವದಂತಿಗಳಿಗೆ ಜನರು ಕಿವಿಗೊಡಬಾರದು. ಇಂತಹ ವದಂತಿಗಳನ್ನು ಹರಡುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸರ್ಕಾರ ಸೋಂಕಿತರ ಚಿಕಿತ್ಸೆಗೆ ಎಷ್ಟು ಖರ್ಚಾಗಿರುತ್ತದೆಯೋ ಅಷ್ಟನ್ನು ಮಾತ್ರ ನೀಡುತ್ತದೆ. ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ವೈರಸ್ ಹರಡುವಿಕೆಯನ್ನು ತಡೆಗಟ್ಟಬಹುದಾಗಿದೆ.
ಕೋವಿಡ್-19 ತಡೆಗಟ್ಟುವಲ್ಲಿ ಜನಪ್ರತಿನಿಧಿಗಳು, ಸಮಾಜ ಮುಖಂಡರ ಪಾತ್ರವು ಪ್ರಮುಖವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಆಯಾ ಸಮಾಜದ ಜನಪ್ರತಿನಿಧಿಗಳು ಹಾಗೂ ಮುಖಂಡರು ಜನರಿಗೆ ಅರಿವು ಮೂಡಿಸುವ ಮೂಲಕ ಸ್ವಯಂ ಪ್ರೇರಿತರಾಗಿ ತಪಾಸಣೆಗೆ ಬರುವಂತೆ ಪ್ರೇರೆಪಿಸುವ ಕಾರ್ಯವನ್ನು ಕೈಗೊಳ್ಳಬೇಕಾಗುತ್ತದೆ. ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿರುವವರು, 60 ವರ್ಷ ಮೇಲ್ಪಟ್ಟ ವಯೋ ವೃದ್ಧರು ಹಾಗೂ ಗರ್ಭಿಣಿ ಸ್ತ್ರೀಯರು ತಪಾಸಣೆಗೆ ಒಳಪಡಿಸುವುದು ಮೊದಲ ಆಧ್ಯತೆಯಾಗಿದ್ದು, ಅಂತಹವರು ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ನಮ್ಮ ಉದ್ದೇಶ ಪ್ರಥಮ ಚಿಕಿತ್ಸೆಯಿಂದ ರೋಗವನ್ನು ತಡೆಗಟ್ಟುವುದು ಮತ್ತು ರೋಗದಿಂದ ಮರಣ ಪ್ರಮಾಣವನ್ನು ನಿಯಂತ್ರಿಸುವುದಾಗಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇನ್ನು ಮುಂದೆ ಆರೋಗ್ಯ ಸಿಬ್ಬಂದಿಯವರು ತಮ್ಮ ಮನೆ ಬಾಗಿಲಿಗೆ ಬಂದು ತಪಾಸಣೆ ನಡೆಸಲಿದ್ದು ಅವರಿಗೆ ಸಹಕಾರ ನೀಡುವುದರೊಂದಿಗೆ ಕೊವಿಡ್-19 ಮುಕ್ತ ಸಮಾಜ ನಿರ್ಮಿಸಲು ಸ್ಪಂದಿಸಬೇಕೆಂದು ಸಾರ್ವಜನಿಕರಲ್ಲಿ ಅವರು ವಿನಂತಿಸಿದ್ದಾರೆ.