-->
ಪ್ರಿಯಕರ ಇಷ್ಟಪಡಲಿಲ್ಲ ಎಂದು ಮೂರು ವರ್ಷದ ಮಗುವನ್ನು ಸರೋವರಕ್ಕೆ ಎಸೆದು ಕೊಂದ ಪಾಪಿ ತಾಯಿ

ಪ್ರಿಯಕರ ಇಷ್ಟಪಡಲಿಲ್ಲ ಎಂದು ಮೂರು ವರ್ಷದ ಮಗುವನ್ನು ಸರೋವರಕ್ಕೆ ಎಸೆದು ಕೊಂದ ಪಾಪಿ ತಾಯಿ



ಅಜ್ಮೇರ್(ರಾಜಸ್ಥಾನ): ತನ್ನ ಪ್ರಿಯಕರ ಇಷ್ಟ ಪಡಲಿಲ್ಲವೆಂದು ತನ್ನ ಮೂರು ವರ್ಷದ ಮಗುವನ್ನು ಸರೋವರಕ್ಕೆ ಎಸೆದು ಕೊಲೆ ಮಾಡಿದ ಪಾಪಿ ತಾಯಿಯನ್ನು ಅಜ್ಮೇರ್ ಪೋಲಿಸರು ಬಂಧಿಸಿದ್ದಾರೆ.

ಮೂಲತಃ ಉತ್ತರ ಪ್ರದೇಶದ ವಾರಣಾಸಿ ನಿವಾಸಿ ಅಂಜಲಿ(28) ಪತಿಯಿಂದ ಪ್ರತ್ಯೇಕಗೊಂಡ ಬಳಿಕ ಅಜ್ಮೇರ್‌ಗೆ ಸ್ಥಳಾಂತರಗೊಂಡಿದ್ದಳು. ಅಲ್ಲಿ ತನ್ನ ಪ್ರಿಯಕರ ಅಲ್ಕೇಶ್‌ನೊಂದಿಗೆ ವಾಸವಾಗಿದ್ದಳು. ಆಕೆ ಹೋಟೆಲ್‌ವೊಂದರಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದಳು. ಅಲ್ಕೇಶ್ ಕೂಡ ಅಲ್ಲಿಯೇ ಕೆಲಸ ಮಾಡುತ್ತಿದ್ದಾನೆ.

ಮಂಗಳವಾರ ರಾತ್ರಿ ಮಗು ಮಲಗಿದ ಬಳಿಕ ಅದನ್ನೆತ್ತಿಕೊಂಡು ಹೋಗಿ ಸರೋವರಕ್ಕೆ ನೀರಿಗೆ ಎಸೆದಿದ್ದಳು. ತಡರಾತ್ರಿ ಆ ಪ್ರದೇಶದಲ್ಲಿ ಗಸ್ತುಕರ್ತವ್ಯದಲ್ಲಿದ್ದ ಹೆಡ್ ಕಾನ್‌ಸ್ಟೇಬಲ್ ಗೋವಿಂದ ಶರ್ಮಾ ಅವರು ರಸ್ತೆಯಲ್ಲಿ ಅಂಜಲಿ ಮತ್ತು ಅಲ್ಕೇಶ್‌ರನ್ನು ಕಂಡು ಇಷ್ಟು ರಾತ್ರಿಯಲ್ಲಿ ಇಲ್ಲೇನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ತಾನು ಮಗುವಿನೊಂದಿಗೆ ಮನೆಯಿಂದ ಹೊರಕ್ಕೆ ಬಂದಿದ್ದೆ. ಆದರೆ ದಾರಿಯಲ್ಲಿ ಮಗು ಇದ್ದಕ್ಕಿದ್ದಂತೆ ನಾಪತ್ತೆಯಾಗಿದೆ. ಆಗಿನಿಂದ ಹುಡುಕುತ್ತಿದ್ದರೂ ಪತ್ತೆಯಾಗಿಲ್ಲ ಎಂದು ಅಂಜಲಿ ಉತ್ತರಿಸಿದ್ದಾಳೆ.

ಪೋಲಿಸರು ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದಾಗ ಅಂಜಲಿ ತನ್ನ ಪುತ್ರಿಯನ್ನು ಎತ್ತಿಕೊಂಡು ಸರೋವರದ ಬಳಿ ಬಂದಿರುವುದು ಕಂಡುಬಂದಿತ್ತು. ಕೆಲ ಗಂಟೆಗಳ ಬಳಿಕ ನಸುಕಿನ 1:30ರ ಸುಮಾರಿಗೆ ಆಕೆ ಒಬ್ಬಳೇ ಕಂಡು ಬಂದಿದ್ದು, ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿದ್ದಳು. ಈ ದೃಶ್ಯಾವಳಿಗಳು ಅಂಜಲಿಯ ಹೇಳಿಕೆಗೆ ವ್ಯತಿರಿಕ್ತವಾಗಿದ್ದು, ಸಂಶಯ ಹುಟ್ಟು ಹಾಕಿತ್ತು.

ಬುಧವಾರ ಬೆಳಗ್ಗೆ ಪೋಲಿಸರು ಸರೋವರದಲ್ಲಿ ಮಗುವಿನ ಮೃತದೇಹವನ್ನು ಪತ್ತೆ ಹಚ್ಚಿದ್ದರು. ಅಂಜಲಿಯನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಮಗುವನ್ನು ಸರೋವರದಲ್ಲಿ ಎಸೆದಿದ್ದನ್ನು ಒಪ್ಪಿಕೊಂಡಿದ್ದಳು. ಅಂಜಲಿ ಒಬ್ಬಳೇ ಈ ಕೊಲೆಯನ್ನು ಮಾಡಿದ್ದಾಳೆ ಎನ್ನುವುದನ್ನು ಪೋಲಿಸರು ಕಂಡುಕೊಂಡಿದ್ದಾರೆ. ನಸುಕಿನ ಎರಡು ಗಂಟೆಯ ಸುಮಾರಿಗೆ ಅಂಜಲಿ ಮಗು ಕಾಣೆಯಾಗಿದೆ ಎಂದು ಅಲ್ಕೇಶ್‌ಗೆ ತಿಳಿಸಿದ್ದಳು.

ತನ್ನ ಪತಿಯಿಂದ ಜನಿಸಿದ್ದ ಮಗುವನ್ನು ಅಲ್ಕೇಶ್ ಇಷ್ಟ ಪಡುತ್ತಿರಲಿಲ್ಲ. ಈ ಕಾರಣಕ್ಕೆ ಆಕೆ ತನ್ನನ್ನು ಆಗಾಗ್ಗೆ ಅಣಕಿಸುತ್ತಿದ್ದ. ಒತ್ತಡದಿಂದಾಗಿ ತಾನು ಈ ಕೃತ್ಯವನ್ನು ಮಾಡಿದ್ದಾಗಿ ಅಂಜಲಿ ಪೋಲಿಸರಿಗೆ ತಿಳಿಸಿದ್ದಾಳೆ.
ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೋಲಿಸರು ಅಂಜಲಿಯನ್ನು ಬಂಧಿಸಿದ್ದಾರೆ. ಅಲ್ಕೇಶ್ ಯಾವುದೇ ರೀತಿಯಲ್ಲಿ ಮಗುವಿನ ಕೊಲೆಯಲ್ಲಿ ಭಾಗಿಯಾಗಿದ್ದನೇ ಎನ್ನುವುದನ್ನು ತಿಳಿದುಕೊಳ್ಳಲು ತನಿಖೆಯನ್ನು ಮುಂದುವರಿಸಿದ್ದಾರೆ.

Ads on article

Advertise in articles 1

advertising articles 2

Advertise under the article