ಉಡುಪಿ: ಚೂರಿ ಇರಿತಕ್ಕೊಳಗಾದ ಯುವತಿ ಮೃತ್ಯು - ಪ್ರಿಯಕರನೂ ಆತ್ಮಹತ್ಯೆಗೆ ಶರಣು Murder
Saturday, September 13, 2025
ಉಡುಪಿ: ಇಲ್ಲಿನ ಬ್ರಹ್ಮಾವರದ ಕೊಕ್ಕರ್ಣೆಯಲ್ಲಿ ಪ್ರೇಮಿಯಿಂದ ಚಾಕು ಇರಿತಕ್ಕೆ ಒಳಗಾಗಿ ಗಂಭೀರ ಸ್ಥಿತಿಯಲ್ಲಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಚೂರಿ ಇರಿದು ಕೊಲೆಗೈದ ಪ್ರೇಮಿಯೂ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಆರೋಪಿ ಕೊಕ್ಕರ್ಣೆ ಚೆಗರಿಬೆಟ್ಟು ನಿವಾಸಿ ಕಾರ್ತಿಕ್ ಪೂಜಾರಿ ತನ್ನ ನೆರೆಮನೆ ನಿವಾಸಿ ರಕ್ಷಿತಾ ಪೂಜಾರಿ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಆದರೆ ಆಕೆ ಮತ್ತು ಆಕೆಯ ಮನೆಯವರು ವಿವಾಹ ನಿರಾಕರಿಸಿದ್ದಕ್ಕೆ ಶುಕ್ರವಾರ ಚೂರಿಯಿಂದ ಕುತ್ತಿಗೆ ಹಾಗೂ ಎದೆಯ ಭಾಗಕ್ಕೆ ಇರಿದು ಪರಾರಿಯಾಗಿದ್ದನು. ಪರಿಣಾಮ ಗಂಭೀರವಾಗಿ ಗಾಯಗೊಂಡ ರಕ್ಷಿತಾ ಅವರನ್ನು ಮಣಿಪಾಲ ಆಸ್ಪತ್ರೆ ದಾಖಲಿಸಲಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಅಕ್ಷತಾ ಸಂಜೆ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಕ್ಷಿತಾ ಪೂಜಾರಿಗೆ ಚಾಕುವಿನಿಂದ ಇರಿದು ಕೊಲೆಗೈದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೊಲೆ ಆರೋಪಿ ಕಾರ್ತಿಕ್ ಪೂಜಾರಿ ಮೃತದೇಹ ಅಲ್ಲಿಯೇ ಸಮೀಪದ ಬಾವಿಯಲ್ಲಿ ಪತ್ತೆಯಾಗಿದೆ. ಈತ ಕೊಲೆ ಮಾಡಿದ ಬಳಿಕ ಪರಾರಿಯಾಗಿ ಅಲ್ಲೇ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.