ಇಸ್ಲಾಂಗೆ ಬಲವಂತದ ಮತಾಂತರಕ್ಕೆ ಒತ್ತಾಯ: 23ವರ್ಷದ ಯುವತಿ ಆತ್ಮಹತ್ಯೆಗೆ ಶರಣು, ಪ್ರಿಯಕರ ಅರೆಸ್ಟ್
Tuesday, August 12, 2025
ಎರ್ನಾಕುಲಂ(ಕೇರಳ): ಬಲವಂತವಾಗಿ ಮತಾಂತರಕ್ಕೆ ಒತ್ತಾಯಿಸಲಾಗುತ್ತಿದೆ ಎಂದು ಆರೋಪಿಸಿ ಕೋತಮಂಗಲಂನಲ್ಲಿ 23 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆಕೆಯ ಪ್ರೇಮಿಯನ್ನು ಬಂಧಿಸಿದ್ದಾರೆ.
ಶಿಕ್ಷಕ ತರಬೇತಿ ಕೋರ್ಸ್ (ಟಿಟಿಸಿ) ವಿದ್ಯಾರ್ಥಿನಿ ಸೋನಾ ಎಲ್ಲೋಸ್, ತನ್ನ ಪ್ರಿಯಕರ ರಮೀಝ್ ತನ್ನ ಮೇಲೆ ಹಲ್ಲೆ ನಡೆಸಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದಾನೆ ಎಂದು ಆರೋಪಿಸಿ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪೊಲೀಸರ ಪ್ರಕಾರ, ರಮೀಝ್ ಮದುವೆಯನ್ನು ನೋಂದಾಯಿಸುವ ಭರವಸೆಯ ಮೇರೆಗೆ ತನ್ನ ಮನೆಗೆ ಕರೆದೊಯ್ದಿದ್ದ. ಅದಕ್ಕೂ ಮೊದಲು ಅವನ ಕುಟುಂಬವು ಆಕೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸಿತ್ತು. ಎಂದು ಸೋನಾ ಹೇಳಿಕೊಂಡಿದ್ದಾಳೆ.
ಪೊಲೀಸರು ರಮೀಝ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ರಮೀಝ್ ವಿವಾಹದ ಸುಳ್ಳು ಭರವಸೆ ನೀಡಿ ಸೋನಾಳೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದ. ಬಳಿಕ ಬಲವಂತವಾಗಿ ಧಾರ್ಮಿಕ ಮತಾಂತರಕ್ಕೆ ಒತ್ತಾಯಿಸಿದ್ದ. ಈ ಆರೋಪಗಳನ್ನು ಪರಿಶೀಲಿಸುವುದು ಸೇರಿದಂತೆ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ, ಆಕೆಯ ಸಾವು "ಕೇರಳಕ್ಕೆ ಹರಡುತ್ತಿರುವ ಜಿಹಾದಿ ಭಯೋತ್ಪಾದನೆ'ಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದೆ. ಅಲ್ಲದೆ ಕಾಂಗ್ರೆಸ್ ಮತ್ತು ಸಿಪಿಎಂ ಇಂತಹ ಘಟನೆಗಳನ್ನು ತುಷ್ಟೀಕರಣದ ನೆಪದಲ್ಲಿ ಮುಚ್ಚಿಹಾಕುತ್ತಿವೆ ಎಂದು ಆರೋಪಿಸಿದೆ.