ಹೆತ್ತ ಮಗಳನ್ನೇ ಕೊಲೆಗೈದು ಪ್ರಿಯಕರನೊಂದಿಗೆ ಪಾರ್ಟಿ: ಪಾಪಿ ತಾಯಿ, ಲಿವ್-ಇನ್ ಪಾರ್ಟನರ್ ಅರೆಸ್ಟ್
Friday, July 18, 2025
ಉತ್ತರಪ್ರದೇಶ: ಇಲ್ಲೊಬ್ಬ ಪಾಪಿ ತಾಯಿ ತನ್ನ 7ವರ್ಷದ ಪುತ್ರಿಯನ್ನು ತನ್ನ ಲಿವ್-ಇನ್ ಪಾರ್ಟನರ್‌ನೊಂದಿಗೆ ಸೇರಿ ಕೊಲೆಗೈದ ಘಟನೆ ನಡೆದಿದೆ. ಇದೀಗ ಪೊಲೀಸರು ಇಬ್ಬರನ್ನು ಬಂಧಿಸಿ ಕಂಬಿ ಹಿಂದೆ ಕಳುಹಿಸಿದ್ದಾರೆ.
ಖುಂದಾರಿ ಬಜಾರ್ ನಿವಾಸಿ ರೋಶ್ನಿ ಮತ್ತು ಆಕೆಯ ಪ್ರಿಯಕರ ಉದಿತ್ ಜೈಸ್ವಾಲ್ ಬಂಧಿತ ಆರೋಪಿಗಳು.
ಜುಲೈ 13ರ ರಾತ್ರಿ ಖುಂದಾರಿ ಬಜಾರ್‌ನಲ್ಲಿ ಈ ಘಟನೆ ನಡೆದಿದ್ದು, ರೋಶ್ನಿಯ ಏಳು ವರ್ಷದ ಪುತ್ರಿ ತನ್ನ ತಂದೆಯೊಂದಿಗೆ ಇರುತ್ತೇನೆಂದು ಹಠ ಮಾಡಿದ್ದಾಳೆ. ಇದಕ್ಕೆ ಒಪ್ಪದ ಆರೋಪಿತೆ ರೋಶ್ನಿ ತನ್ನ ಪ್ರಿಯಕರ ಉದಿತ್ ಜೈಸ್ವಾಲ್‌ನೊಂದಿಗೆ ಸೇರಿ ಪುತ್ರಿಯನ್ನು ಹೊಡೆದು ಕೊಂದು ಹಾಕಿದ್ದಾಳೆ.
ಅಪರಾಧ ಎಸಗಿದ ಬಳಿಕ ಮಗುವಿನ ಮೃತದೇಹವನ್ನು ಮನೆಯಲ್ಲಿ ಅಡಗಿಸಿ ಇಬ್ಬರೂ ಲಕ್ನೋದಾದ್ಯಂತ ತಿರುಗಾಡಿ ಪಾರ್ಟಿ ಮಾಡಿ, ಹುಸೈನ್‌ಗಂಜ್‌ನಲ್ಲಿರುವ ಹೋಟೆಲ್‌ನಲ್ಲಿ ತಂಗಿದ್ದರು.
ಮನೆಗೆ ಹಿಂದಿರುಗಿದಾಗ ಮಗುವಿನ ಮೃತದೇಹ ಕೊಳೆತು ದುರ್ವಾಸನೆ ಬರುತ್ತಿತ್ತು. ಆದ್ದರಿಂದ ರೋಶ್ನಿ ಮತ್ತು ಉದಿತ್ ಜೈಸ್ವಾಲ್ ಕೊಳೆಯುತ್ತಿರುವ ದೇಹದಿಂದ ಬರುತ್ತಿದ್ದ ದುರ್ವಾಸನೆಯನ್ನು ಎಸಿ ಮತ್ತು ಏರ್ ಫ್ರೆಶ್ನರ್‌ಗಳಿಂದ ತಡೆಯಲು ಪ್ರಯತ್ನಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಆಗ ಅವರು ಪೊಲೀಸರಿಗೆ ಕರೆ ಮಾಡಿ, ತಮ್ಮ ಪುತ್ರಿಯನ್ನು ತನ್ನ ಪತಿ ಕೊಲೆ ಮಾಡಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದರು.
ಆದರೆ ಸಿಸಿಟಿವಿ ದೃಶ್ಯಾವಳಿಗಳು, ಕರೆ ದಾಖಲೆಗಳು ಮತ್ತು ಸಾಕ್ಷಿಗಳ ಹೇಳಿಕೆಗಳು ಘಟನೆಗಳ ಬಗ್ಗೆ ಅವರ ಹೇಳಿಕೆಗಳಿಗೆ ವಿರುದ್ಧವಾಗಿತ್ತು. ಆದ್ದರಿಂದ ಪೊಲೀಸರು ರೋಶ್ನಿ ಮತ್ತು ಉದಿತ್ ಜೈಸ್ವಾಲ್‌ನನ್ನು ಬಂಧಿಸಿ ಪೊಲೀಸ್ ಭಾಷೆಯಲ್ಲಿ ತನಿಖೆ ಮಾಡಿದ್ದಾರೆ. ಆಗ ಸಹ ಆರೋಪಿ ಉದಿತ್ ಜೈಸ್ವಾಲ್ ತಪ್ಪೊಪ್ಪಿಕೊಂಡಾಗ ನಿಜ ಸಂಗತಿ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟುವಿಕೆ ಸಾವಿಗೆ ಕಾರಣ ಎನ್ನಲಾಗಿದೆ. ಮೃತದೇಹದ ಪರೀಕ್ಷೆಗೆ 36 ರಿಂದ 48 ಗಂಟೆಗಳ ಮೊದಲು ಕೊಲೆ ನಡೆದಿದೆ ಎಂದು ವೈದ್ಯರು ದೃಢಪಡಿಸಿದರು.