ವಿವಾಹವಾಗುವುದಾಗಿ ನಂಬಿಸಿ ಲೈಂಗಿಕವಾಗಿ ದುರ್ಬಳಕೆ- ಬಿಜೆಪಿ ಶಾಸಕ ಪ್ರಭು ಚೌಹಾಣ್ ಪುತ್ರನ ವಿರುದ್ಧ ದೂರು
Friday, July 18, 2025
ಬೀದರ್ : ವಿವಾಹ ಆಗುವುದಾಗಿ ನಿಶ್ಚಿತಾರ್ಥ ಮಾಡಿಕೊಂಡ ಬಳಿಕ ಹಲವಾರು ಬಾರಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡು ಇದೀಗ ಮದುವೆಗೆ ಒಪ್ಪುತ್ತಿಲ್ಲ ಎಂದು ಆರೋಪಿಸಿ ಬಿಜೆಪಿ ಶಾಸಕ ಪ್ರಭು ಚೌವ್ಹಾಣ ಪುತ್ರ ಪ್ರತೀಕ್ ಚೌಹಾಣ್ ವಿರುದ್ಧ ಸಂತ್ರಸ್ತ ಯುವತಿ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿರುವ ಬಗ್ಗೆ ವರದಿಯಾಗಿದೆ.
ಈ ವಿಚಾರವಾಗಿ ಕೆಲ ದಿನಗಳ ಹಿಂದೆ ಪ್ರಭು ಚೌವ್ಹಾಣ್ ಮತ್ತು ಸಂತ್ರಸ್ತೆಯ ಕುಟುಂಬದವರ ನಡುವೆ ಮಾರಾಮಾರಿ ನಡೆದಿತ್ತು. ಇದರ ವಿಡಿಯೋ ಕೂಡ ವೈರಲ್ ಆಗಿತ್ತು. ಇದೀಗ ಸಂತ್ರಸ್ತೆಯು ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ನಿಶ್ಚಿತಾರ್ಥವಾಗಿ 2 ವರ್ಷಗಳಾಯ್ತು. ಮದುವೆ ಮಾಡೋಣ ಎಂದರೆ ಇಂದು ನಾಳೆ ಎಂದು ದಿನ ದೂಡುತ್ತಾ ಬಂದಿದ್ದಾರೆ. ಮದುವೆ ಮಾತುಕತೆಗಾಗಿ ಅವರ ಮನೆಗೆ ಹೋದಾಗ ಮದುವೆಗೆ ನಿರಾಕರಿಸಿದ್ದಾರೆ. ಆದರೆ ಮದುವೆ ಬೇಡ ಎನ್ನುವುದಕ್ಕೆ ಕಾರಣ ಹೇಳುತ್ತಿಲ್ಲ. ಇದರಿಂದಾಗಿ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದೇನೆ ಎಂದು ಸಂತ್ರಸ್ತೆಯು ಮಾಧ್ಯಮದ ಮುಂದೆ ತಮ್ಮ ಅಳಲು ತೊಡಿಕೊಂಡಿದ್ದಾರೆ.