ಬಹು ಪತ್ನಿತ್ವ ಸಂಪ್ರದಾಯ ಉಳಿಸಲು ಒಬ್ಬಳೇ ಯುವತಿಯನ್ನು ಮದುವೆಯಾದ ಸೋದರರು
Sunday, July 20, 2025
ಶಿಮ್ಲಾ: ಹಿಮಾಚಲ ಪ್ರದೇಶದ ಬುಡಕಟ್ಟು ಸಮುದಾಯಗಳಲ್ಲಿ ಹಾಥಿ ಸಮುದಾಯವೂ ಒಂದು. ಈ ಸಮುದಾಯದಲ್ಲಿ ಶತಮಾನಗಳಷ್ಟು ಹಳೆಯ ಬಹು ಪತಿತ್ವ ಸಂಪ್ರದಾಯವಿದೆ. ಈ ಸಮುದಾಯದ ಸಹೋದರರಿಬ್ಬರು, ಒಬ್ಬಳೇ ಯುವತಿಯನ್ನು ಮದುವೆಯಾಗಿ ಬಹು ಪತ್ನಿತ್ವ ಸಂಪ್ರದಾಯವನ್ನು ಉಳಿಸಲು ಮುಂದಾಗಿದ್ದಾರೆ.
ಹಾಥಿ ಬುಡಕಟ್ಟು ಜನತೆ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಹಿಮಾಚಲ ಪ್ರದೇಶದ ಶಿಲೈ ಗ್ರಾಮದಲ್ಲಿ ಈ ವಿವಾಹವು ನೆರವೇರಿದೆ. ಸಹೋದರರಾದ ಪ್ರದೀಪ್ ಮತ್ತು ಕಪಿಲ್ ಎಂಬವರು ಸುನೀತಾ ಎಂಬ ಯುವತಿಯನ್ನು ವಿವಾಹವಾಗಿದ್ದಾರೆ.
'ಇದು ಸಂಪೂರ್ಣ ತನ್ನದೇ ಆಯ್ಕೆ. ಯಾರ ಒತ್ತಾಯದಿಂದಲೂ ಈ ನಿರ್ಧಾರ ಕೈಗೊಂಡಿಲ್ಲ. ನನಗೆ ನನ್ನ ಸಂಪ್ರದಾಯದ ಬಗ್ಗೆ ಹೆಮ್ಮೆಯಿದೆ. ಆದ್ದರಿಂದ ಇದನ್ನು ಸ್ವಇಚ್ಛೆಯಿಂದ ಆರಿಸಿಕೊಂಡೆ' ಎಂದು ವಧು ಸುನೀತಾ ಹೇಳಿದ್ದಾರೆ.
ಇಂತಹ ವಿವಾಹ ಇದೇ ವಿವಾಹವಲ್ಲ. ಇಂತಹ ವಿವಾಹಗಳು ಸದ್ದಿಲ್ಲದೇ ನಡೆಯುತ್ತಿರುತ್ತವೆ. ನಮ್ಮ ಹಳ್ಳಿಯಲ್ಲಿ ಇಬ್ಬರು ಅಥವಾ ಮೂವರು ಸಹೋದರರು ಒಬ್ಬಳೇ ಹೆಂಡತಿಯನ್ನು ಹೊಂದಿದ್ದಾರೆ. ಈ ವಿವಾಹದ ವಿಶೇಷತೆ ಏನೆಂದರೆ, ಸಂಪ್ರದಾಯವನ್ನು ಹೆಮ್ಮೆಯಿಂದ ಒಪ್ಪಿಕೊಂಡು ಬಹಿರಂಗವಾಗಿ ವಿವಾಹ ಆಗಿರುವುದು' ಎಂದು ಶಿಲೈ ಗ್ರಾಮದ ನಿವಾಸಿ ಬಿಶನ್ ತೋಮರ್ ಹೇಳಿದ್ದಾರೆ.
ಈ ಪ್ರದೇಶದಲ್ಲಿ ಬಹುಪತಿತ್ವ ಸಾಮಾನ್ಯ ಆಚರಣೆಯಾಗಿದ್ದು, ಪೂರ್ವಜರ ಭೂಮಿ ವಿಭಜನೆ ಆಗದಂತೆ ತಡೆಯಲು, ಹೆಣ್ಣು ವಿಧವೆಯಾಗುವುದನ್ನು ತಪ್ಪಿಸುವುದಕ್ಕೆ ಪೂರ್ವಜರು ಕಂಡುಕೊಂಡ ಮಾರ್ಗವಿದು ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.