ರಸ್ತೆ ಬದಿ ನವಜಾತ ಹೆಣ್ಣುಶಿಶುವನ್ನು ತೊರೆದು ಹೋದ ಪಾಪಿ ಹೆತ್ತವರು
Sunday, July 20, 2025
ಚಾಮರಾಜನಗರ: ಇಲ್ಲಿನ ಹರವೆ ಹೋಬಳಿಯ ಸಾಗಡೆ ಮತ್ತು ತಮ್ಮಡಹಳ್ಳಿ ರಸ್ತೆ ಬದಿಯಲ್ಲಿ 10-15 ದಿನದ ನವಜಾತ ಹೆಣ್ಣು ಶಿಶುವನ್ನು ಪಂಚೆಯಲ್ಲಿ ಸುತ್ತಿಟ್ಟು ಪೋಷಕರು ತೊರೆದು ಹೋಗಿರುವ ಘಟನೆ ಬೆಳಕಿಗೆ ಬಂದಿದೆ.
ಚಾಮರಾಜನಗರ ತಾಲ್ಲೂಕಿನ ಸಾಗಡೆ ತಮ್ಮಡಹಳ್ಳಿ ರಸ್ತೆ ಬದಿಯಲ್ಲಿ ಸ್ಥಳೀಯ ಪರಮೇಶ್ ಎಂಬುವರು ಈ ಹೆಣ್ಣು ಶಿಶುವನ್ನು ಕಂಡಿದ್ದಾರೆ. ತಕ್ಷಣ ಮಗುವನ್ನು ಸಾಗಡೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಆರೈಕೆ ಮಾಡಿಸಿದ್ದಾರೆ.
ರಸ್ತೆ ಬದಿಯಲ್ಲಿ ನವಜಾತ ಶಿಶು ದೊರಕಿರುವ ವಿಚಾರ ತಿಳಿದ ಅಂಗನವಾಡಿ ಕಾರ್ಯಕರ್ತೆ ನಾಗಮಣಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಶಿಶುವನ್ನು ಚಾಮರಾಜನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಕರೆ ತಂದಿದ್ದಾರೆ. ಸದ್ಯ ಮಗುವನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಶಿಶುವನ್ನು ರಕ್ಷಿಸಿದ ಸ್ಥಳೀಯ ಪರಮೇಶ್ ಮಾತನಾಡಿ, ಚಾಮರಾಜನಗರಕ್ಕೆ ಬರುತ್ತಿದ್ದಾಗ ಸಾಗಡೆ ಮತ್ತು ತಮ್ಮಡಹಳ್ಳಿ ಯಾರೋ ತೊರೆದು ಹೋದ ಈ ಶಿಶುವನ್ನು ಗಮನಿಸಿದೆ. ತಕ್ಷಣ ಸ್ಥಳೀಯ ಆಶಾಕಾರ್ಯಕರ್ತೆಗೆ ಮಾಹಿತಿ ನೀಡಿ ಮಗುವನ್ನು ಆಸ್ಪತ್ರೆಗೆ ಸೇರಿಸಿದೆವು. ಬಳಿಕ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದೇವೆ' ಎಂದಿದ್ದಾರೆ.
ಈ ಬಗ್ಗೆ ಅಂಗನವಾಡಿ ಕಾರ್ಯಕರ್ತೆ ನಾಗಮಣಿ ಅವರು ಮಾತನಾಡಿ, ನಾನು ಅಂಗನವಾಡಿಯಲ್ಲಿರಬೇಕಾದ್ರೆ ನನಗೆ ಒಂದು ಫೋನ್ ಬಂತು. ರಸ್ತೆ ಬದಿ ಮಗು ಸಿಕ್ಕಿರುವುದಾಗಿ ಹೇಳಿದ್ರು. ತಕ್ಷಣವೇ ಸ್ಥಳಕ್ಕೆ ಹೋದೆ. ಮಗುವನ್ನು ನೋಡಿದಾಗ ಚೆನ್ನಾಗಿತ್ತು. ನಂತರ ಸಾಗಡೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಗುವನ್ನು ಕರೆದೊಯ್ದೆವು. ಮಗು ಸುಸ್ತಾಗಿದ್ದರಿಂದಾಗಿ ಜಿಲ್ಲಾಸ್ಪತ್ರೆಗೆ ಕರೆತಂದಿದ್ದೇವೆ. ಸದ್ಯ ಮಗು ಆರೋಗ್ಯವಾಗಿದೆ' ಎಂದು ಹೇಳಿದ್ದಾರೆ.