ಉಡುಪಿ: ಹಳೆಯ ಸ್ಪ್ಲೆಂಡರ್ ಬೈಕ್‌ನಲ್ಲಿ ದೇಶ ಸುತ್ತಿರುವ ಅಪ್ಪ ಮಗನ ಜೋಡಿಗೆ ಹೀರೋ ಕಂಪೆನಿಯಿಂದ ದುಬಾರಿ ಉಡುಗೊರೆ
ಉಡುಪಿ: ಪ್ರಪಂಚದ 2ನೇ ಅತೀ ಎತ್ತರ ಹಾಗೂ ಅತ್ಯಂತ ಕಠಿಣ ಮಾರ್ಗಗಳಲ್ಲಿ ಒಂದಾಗಿರುವ ಕಾಶ್ಮೀರದ ಖಾರ್ದುಂಗ್ಲ ಪಾಸ್‌ಗೆ ತಮ್ಮ ಹಳೆಯ ಸ್ಪ್ಲೆಂಡರ್ ಬೈಕ್‌ನಲ್ಲಿ ಯಶಸ್ವಿಯಾಗಿ ಹೋಗಿ ಬಂದ ಉಡುಪಿಯ ತಂದೆ- ಮಗನಿಗೆ ಹೀರೋ ಕಂಪೆನಿಯು ಭರ್ಜರಿ ಉಡುಗೊರೆ ನೀಡಿದೆ.
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವ ಗ್ರಾಮದ ರಾಜೇಂದ್ರ ಶೆಣೈ ಮತ್ತವರ ಪುತ್ರ ಪ್ರಜ್ವಲ್ ಶೆಣೈ ಅವರ ಈ ಸಾಹಸಗಾಥೆಯ ಮಾಹಿತಿ ಪಡೆದ ಹೀರೋ ಕಂಪನಿ, ಅವರಿಗೆ ತನ್ನ ಮಾಸ್ಟರ್‌ಪೀಸ್ ಎಂದು ಕರೆಯುವ ಸೆಂಟಿನ್ನಿಯಲ್ ಸಿಇ- 100 ಬೈಕನ್ನು ನೀಡಿ ಗೌರವಿಸಿದೆ. ಶನಿವಾರ ಉಡುಪಿಯ ಹೀರೋ ಶೋರೂಂನಲ್ಲಿ ತಂದೆ - ಮಗನಿಗೆ ಈ ಬೈಕನ್ನು ಉಡುಗೊರೆಯಾಗಿ ಹಸ್ತಾಂತರಿಸಲಾಗಿದೆ.
ರಾಜೇಂದ್ರ ಶೆಣೈ ತಮ್ಮ 25 ವರ್ಷ ಹಳೆಯ ಹೀರೋ ಸ್ಪ್ಲೆಂಡರ್ ಬೈಕ್‌ನಲ್ಲಿ ಈವರೆಗೆ 17 ರಾಜ್ಯಗಳನ್ನು ಸಂಚರಿಸಿದ್ದಾರೆ. ತಿರುಪತಿ, ಮಧುರೈ, ಕನ್ಯಾಕುಮಾರಿ, ಪುರಿ, ಶಿರಡಿ, ನಾಸಿಕ್, ಪಂಢರಾಪುರ, ಅಯೋಧ್ಯೆ ಹೀಗೆ ಹತ್ತಾರು ಪುಣ್ಯಕ್ಷೇತ್ರಗಳಿಗೆ ಹೋಗಿ ಬಂದಿದ್ದಾರೆ. ಇತ್ತೀಚೆಗೆ ಪ್ರಯಾಗ್‌ರಾಜ್‌ನ ಮಹಾಕುಂಭಮೇಳಕ್ಕೂ ಹೋಗಿ ಬಂದಿದ್ದಾರೆ ಈ ಅಪ್ಪ-ಮಗ ಜೋಡಿ.
ಕಳೆದ ವರ್ಷ ಈ ತಂದೆ ಮಗ ಹೊಸ ಸಾಹಸಕ್ಕೆ ಕೈಹಾಕಿದ್ದರು. ಬೇರೆಯವರೆಲ್ಲ ಬುಲೆಟ್ ಅಥವಾ ಅದಕ್ಕಾಗಿಯೇ ಇರುವ ಬೈಕ್‌ಗಳಲ್ಲಿ ಕಾಶ್ಮೀರಕ್ಕೆ ಹೋಗುವ ಸಾಹಸ ಮಾಡುತ್ತಾರೆ. ಆದರೆ ಇವರು ತಮ್ಮ ಮೆಚ್ಚಿನ ಸ್ಪ್ಲೆಂಡರ್ ಬೈಕ್‌ನಲ್ಲಿಯೇ ಕಾಶ್ಮೀರ ಟೂರ್ ಮಾಡಿದ್ದರು. ಕೇವಲ ಹತ್ತೇ ದಿನಗಳಲ್ಲಿ ಉಡುಪಿಯಿಂದ ಸುಮಾರು 1900 ಕಿ.ಮೀ. ದೂರದಲ್ಲಿರುವ, ನೆಲಮಟ್ಟದಿಂದ 17,982 ಅಡಿ ಎತ್ತರದ ಕಾಶ್ಮೀರದ ಖಾರ್ದುಂಗ್ಲಾಕ್ಕೆ ಯಶಸ್ವಿಯಾಗಿ ತಲುಪಿದ್ದರು. ಇದು ಅಪ್ಪ ಮಗನ ಜೋಡಿಯ ಸಾಹಸಕ್ಕೊಂದು ಮಾದರಿಯಾಯಿತು.
ಈ ವರ್ಷ ಹೀರೋ ಮೋಟೋ ಕಾರ್ಪ್ ಸಂಸ್ಥೆಯ ಸಂಸ್ಥಾಪಕ ಡಾ.ಬ್ರಿಜ್ ಮೋಹನ್ ಲಾಲ್ ಮುಂಜಾಲ್ ಅವರ 100ನೇ ಜನ್ಮದಿನವನ್ನು ಕಂಪನಿ ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಿದೆ. ಆದ್ದರಿಂದ ಕಂಪನಿಯು ಸೆಂಟಿನ್ನಿಯಲ್ ಎಂಬ ಹೊಸ ಮಾಡೆಲ್‌ನ ಕೇವಲ 100 ಬೈಕ್‌ಗಳನ್ನು ಬಿಡುಗಡೆ ಮಾಡಿತ್ತು. ಇದು ಕಲೆಕ್ಟರ್ಸ್ ಎಡಿಷನ್ ಆಗಿದ್ದು, ಅವುಗಳನ್ನು ಆನ್‌ಲೈನ್‌ನಲ್ಲಿ ಹರಾಜು ಮಾಡಲಾಗುತ್ತಿದೆ. ಈ ಬೈಕ್‌ಗೆ ಅತೀ ಹೆಚ್ಚು ₹20.30 ಲಕ್ಷವರೆಗೆ ಬಿಡ್ ಮಾಡಲಾಗಿದೆ. ಅಂತಹ ಪ್ರತಿಷ್ಠಿತ ಬೈಕನ್ನು ಶೆಣೈ ಅವರಿಗೆ ಬೆಸ್ಟ್ ಕಸ್ಟಮರ್ ಎಂದು ಗುರುತಿಸಿ, ಉಡುಗೊರೆಯಾಗಿ ನೀಡಿ, ಅವರ ಸಾಹಸಕ್ಕೆ ಗೌರವ ಸಲ್ಲಿಸಿದೆ.