
ತುಳು ವಿದ್ವಾಂಸ ಡಾ. ವಾಮನ ನಂದಾವರ ಅಸ್ತಂಗತ: ಅಂತಿಮ ಇಚ್ಚೆಯಂತೆ ದೇಹದಾನ
ತುಳು ವಿದ್ವಾಂಸ ಡಾ. ವಾಮನ ನಂದಾವರ ಅಸ್ತಂಗತ: ಅಂತಿಮ ಇಚ್ಚೆಯಂತೆ ದೇಹದಾನ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರೂ ಆಗಿದ್ದ ತುಳು ವಿದ್ವಾಂಸ ಡಾ. ವಾಮನ ನಂದಾವರ ಮೃತಪಟ್ಟಿದ್ದಾರೆ.
ಡಾ. ವಾಮನ ನಂದಾವರ ಅವರ ಪಾರ್ಥೀವ ಶರೀರವನ್ನು ಮಂಗಳೂರಿನ ಉರ್ವಾಸ್ಟೋರ್ ನ ತುಳು ಅಕಾಡೆಮಿಯ ಬಯಲುರಂಗ ಮಂದಿರದಲ್ಲಿ ಇರಿಸಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ಮತ್ತು ಅಗಲಿದ ಚೇತನಕ್ಕೆ ತುಳು ಅಕಾಡೆಮಿ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಿಧಾನಸಭಾ ಅಧ್ಯಕ್ಷರಾದ ಯು.ಟಿ. ಖಾದರ್ , ವಿಧಾನ ಪರಿಷತ್ ಸದಸ್ಯರಾದ ಡಾ. ಮಂಜುನಾಥ ಭಂಡಾರಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ. ಪುರುಷೋತ್ತಮ ಬಿಳಿಮಲೆ ಸೇರಿದಂತೆ ಗಣ್ಯರು ಮೃತರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್, ಬ್ಯಾರಿ ಅಕಾಡೆಮಿಯ ಅಧ್ಯಕ್ಷರಾದ ಉಮರ್ ಯು ಹೆಚ್. , ಮಾಜಿ ಶಾಸಕರಾದ ಜೆ.ಆರ್.ಲೋಬೋ, ವಿದ್ವಾಂಸರಾದ ಪ್ರಭಾಕರ ಜೋಶಿ, ಡಾ.ಚಿನ್ನಪ್ಪಗೌಡ, ಇಂದಿರಾ ಹೆಗ್ಗಡೆ, ಅಖಲ ಭಾರತ ಒಕ್ಕೂಟದ ಅಧ್ಯಕ್ಷರಾದ ಎ.ಸಿ.ಭಂಡಾರಿ ಅವರು ಸಂತಾಪ ವ್ಯಕ್ತಪಡಿಸಿದರು.
ಅಕಾಡೆಮಿಯ ರಿಜಿಸ್ಟ್ರಾರ್ , ಸದಸ್ಯರು ಹಾಗೂ ವಾಮನ ನಂದಾವರ ಅವರ ಅಭಿಮಾನಿ ಮಿತ್ರರು ಅಂತಿಮ ದರ್ಶನಗೈದರು.
ದೇಹದಾನ
ಡಾ.ವಾಮನ ನಂದಾವರ ಇವರ ಶರೀರವನ್ನು ಅವರ ಇಚ್ಛೆಯಂತೆ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ದಾನ ಮಾಡಲಾಯಿತು.
ಸಂತಾಪ:
2001ರಿಂದ 2004ರ ಅವಧಿಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಡಾ. ವಾಮನ ನಂದಾವರ ಅವರು ಅನನ್ಯವಾದ ಸೇವೆಯನ್ನು ಸಲ್ಲಿಸಿರುವುದನ್ನು ತುಳುನಾಡು ಹಾಗೂ ತುಳುವರು ಸದಾ ಸ್ಮರಣಿಸುವರು ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಕಾಪಿಕಾಡ್ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.