ಮಂಗಳೂರಲ್ಲಿ ಹೈಕೋರ್ಟ್ ಪೀಠ: ಸಿದ್ದರಾಮಯ್ಯ ಬಳಿಗೆ ಸ್ಪೀಕರ್ ನೇತೃತ್ವದಲ್ಲಿ ನಿಯೋಗ- 70ಕ್ಕೂ ಅಧಿಕ ವಕೀಲರು ಭಾಗಿ
ಮಂಗಳೂರಲ್ಲಿ ಹೈಕೋರ್ಟ್ ಪೀಠ: ಸಿದ್ದರಾಮಯ್ಯ ಬಳಿಗೆ ಸ್ಪೀಕರ್ ನೇತೃತ್ವದಲ್ಲಿ ನಿಯೋಗ- 70ಕ್ಕೂ ಅಧಿಕ ವಕೀಲರು ಭಾಗಿ
ಮಂಗಳೂರಿನಲ್ಲಿ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಸ್ಥಾಪನೆಯಾಗಬೇಕು ಎಂಬ ನಿಟ್ಟಿನಲ್ಲಿ ಹೋರಾಟ ಪ್ರಬಲವಾಗಿ ರೂಪುಗೊಳ್ಳುತ್ತಿದೆ.
ಈಗಾಗಲೇ ಮಂಗಳೂರಿನಲ್ಲಿ ವಿವಿಧ ಸಂಘ- ಸಂಸ್ಥೆಗಳು ಈ ಹೋರಾಟದಲ್ಲಿ ಭಾಗಿಯಾಗಲು ಮತ್ತು ಧ್ವನಿ ಎತ್ತಲು ನಿರ್ಧರಿಸಿದೆ.
ಸದನದಲ್ಲಿ ಈ ವಿಷಯದ ಕುರಿತಂತೆ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ಅವರೂ ಧ್ವನಿ ಮೊಳಗಿಸಿದರು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವರು ಹೇಳಿಕೆ ನೀಡಿ, ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇದು ಹೋರಾಟಕ್ಕೆ ಸ್ವಲ್ಪ ಹಿನ್ನಡೆಯೇ ಆಯಿತು. ಇದೀಗ, ಮತ್ತೆ ಸರ್ಕಾರದ ಮೇಲೆ ಒತ್ತಡ ಹಾಕಲು ಮತ್ತು ಮಂಗಳೂರಿನ ಜನರ ಆಶಯವನ್ನು ಸರ್ಕಾರಕ್ಕೆ ತಿಳಿಸಲು ಸಿದ್ದರಾಮಯ್ಯ ಅವರಿಗೆ ವಕೀಲರ ನಿಯೋಗ ತೆರಳಿದೆ.
ವಿಧಾನಸಭೆಯ ಸಭಾಧ್ಯಕ್ಷ ಹಾಗೂ ಮಂಗಳೂರು ಶಾಸಕ ಶ್ರೀ ಯು.ಟಿ. ಖಾದರ್ ಫರೀದ್ ಅವರ ನೇತೃತ್ವದಲ್ಲಿ ಶಾಸಕರು ಮತ್ತು ವಕೀಲರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಮ್ಮ ಬೇಡಿಕೆಯನ್ನು ಮಂಡಿಸಿದ್ದಾರೆ.
ಮಂಗಳೂರಿನಲ್ಲಿ ಉಚ್ಚ ನ್ಯಾಯಲಯದ ಪೀಠ ಸ್ಥಾಪನೆ ಮಾಡುವ ಬಗ್ಗೆ ಹೋರಾಟ ಸಮಿತಿಯ ಸಂಚಾಲಕ ಹಾಗೂ ವಿಧಾನ ಪರಿಷತ್ ನ ಸದಸ್ಯ ಐವನ್ ಡಿ ಸೋಜ ವಕೀಲರ ನಿಯೋಗದಲ್ಲಿ ಮುಂಚೂಣಿಯಲ್ಲಿ ಪಾಲ್ಗೊಂಡರು.
ಶಾಸಕ ವೇದವ್ಯಾಸ ಕಾಮತ್, ಮಾಜಿ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಹಿರಿಯ ವಕೀಲರಾದ ಟಿ. ನಾರಾಯಣ ಪೂಜಾರಿ ಅವರು ನಿಯೋಗದಲ್ಲಿ ಪಾಲ್ಗೊಂಡಿದ್ದರು.
ವಿಧಾನಸಭೆಯ ಸಭಾಧ್ಯಕ್ಷರಾದ ಯು ಟಿ ಖಾದರ್ ರವರ ಸಮಕ್ಷಮದಲ್ಲಿ ಮುಖ್ಯಮಂತ್ರಿಯವರಿಗೆ ಮಂಗಳೂರು ವಕೀಲರ ಸಂಘದ ಪರವಾಗಿ ಮನವಿಯನ್ನು ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷರಾದ ಎಚ್ ವಿ ರಾಘವೇಂದ್ರ ಮತ್ತು ಹಿರಿಯ ವಕೀಲರಾದ ಎಂ. ಪಿ. ನೊರೂಂನ್ಹ ಕರಾವಳಿಯಲ್ಲಿ ಉಚ್ಛ ನ್ಯಾಯಲಯದ ಸಂಚಾರಿ ಪೀಠ ವನ್ನು ಜರೂರಾಗಿ ಸ್ಥಾಪಿಸುವ ಅಗತ್ಯದ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿದರು.
ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಮತ್ತು ಕಾನೂನು ಸಚಿವರು ಉಚ್ಚ ನ್ಯಾಯಲಯದ ನ್ಯಾಯಧೀಶರೊಂದಿಗೆ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳುದಾಗಿ ಭರವಸೆ ನೀಡಿದರು.