ಮರಳು ದಂಧೆಕೋರರ ಪರ ಹರೀಶ್ ಪೂಂಜಾ ದಾದಾಗಿರಿ: ಬಿಜೆಪಿ ಶಾಸಕನನ್ನು ಹಿಗ್ಗಾಮುಗ್ಗಾ ಜಾಡಿಸಿದ ಕರ್ನಾಟಕ ಹೈಕೋರ್ಟ್!
ಮರಳು ದಂಧೆಕೋರರ ಪರ ಹರೀಶ್ ಪೂಂಜಾ ದಾದಾಗಿರಿ: ಬಿಜೆಪಿ ಶಾಸಕನನ್ನು ಹಿಗ್ಗಾಮುಗ್ಗಾ ಜಾಡಿಸಿದ ಕರ್ನಾಟಕ ಹೈಕೋರ್ಟ್!
ಮರಳು ದಂಧೆಕೋರರ ಪರ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಶಾಸಕ ಹರೀಶ್ ಪೂಂಜಾ ನಡೆಸಿದ ದಾದಾಗಿರಿ ಬಗ್ಗೆ ಹಿಗ್ಗಾಮುಗ್ಗಾ ಜಾಡಿಸಿದ ಕರ್ನಾಟಕ ಹೈಕೋರ್ಟ್,
ಶಾಸಕ, ಸಚಿವರು ಪೊಲೀಸ್ ಠಾಣೆಗೆ ಹೋದರೆ ಪೊಲೀಸರು ಹೇಗೆ ಕೆಲಸ ಮಾಡಬೇಕು ಎಂದು ಪ್ರಶ್ನಿಸಿದೆ.
ಬೆಳ್ತಂಗಡಿ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಬೇಕು ಎಂದು ಕೋರಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ನ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆಕ್ಷೇಪ ವ್ಯಕ್ತಪಡಿಸಿದೆ.
ನಾಳೆ ಭಯೋತ್ಪಾದಕನನ್ನು ಬಂಧಿಸಿದರೆ, ಆತನ ಪುತ್ರ ಕರೆದ ಎಂದು ಆತನ ಬೆಂಬಲಕ್ಕು ಠಾಣೆಗೆ ಹೋಗುತ್ತೀರಾ? ಎಂದು ಪೂಂಜಾ ಅವರನ್ನು ನ್ಯಾಯಪೀಠ ಖಾರವಾಗಿ ಪ್ರಶ್ನಿಸಿದೆ.
ಎಫ್‌ಐಆರ್ ಆದ ತಕ್ಷಣ ಶಾಸಕರು ಠಾಣೆಯಲ್ಲಿ ಹೋಗಿ ಕುಳಿತರೆ ಪೊಲೀಸ್ ಅಧಿಕಾರಿಗಳು ಹೇಗೆ ತಾನೇ ಕರ್ತವ್ಯ ನಿರ್ವಹಿಸಬೇಕು..? ಇಂತಹ ಸಂದರ್ಭದಲ್ಲಿ ಪೊಲೀಸ್ ಠಾಣೆಗೆ ಹೋಗಬಹುದು ಎಂಬ ಒಂದೇ ಒಂದು ತೀರ್ಪು ತೋರಿಸಿ ಎಂದು ಅರ್ಜಿದಾರರನ್ನು ಪ್ರಶ್ನಿಸಿತು.
ಅಕ್ರಮ ಬಂಧನವಾಗಿದ್ದರೆ ಕಾನೂನಿನಲ್ಲಿ ಸೂಕ್ತ ಪರಿಹಾರ ಇದೆ. ದೂರು ನೀಡಿದ ತಕ್ಷಣ ಶಾಸಕರು, ಸಂಸದರು ಪೊಲೀಸ್ ಠಾಣೆಗೆ ಹೋಗಿ ಕುಳಿತರೆ ಪೊಲೀಸರು ತನಿಖೆಯಾದರೂ ಹೇಗೆ ಮಾಡಬಲ್ಲರು..? ನೀವೇಕೆ ಅಲ್ಲಿ ಹೋದಿರಿ ಎಂದು ನ್ಯಾಯಪೀಠ ಅರ್ಜಿದಾರರನ್ನೇ ಪ್ರಶ್ನಿಸಿತು.
ಬಂಧನ ಅಕ್ರಮವಾಗಿದ್ದರೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಬೇಕಿತ್ತು. ಅದು ಬಿಟ್ಟು ಪೊಲೀಸ್ ಠಾಣೆಗೆ ಹೋಗಲು ನೀವ್ಯಾರು ಎಂದು ನ್ಯಾಯಪೀಠವೇ ಹರೀಶ್ ಪೂಂಜಾ ಅವರನ್ನು ಪ್ರಶ್ನಿಸಿತು.
ನಮ್ಮಲ್ಲಿ ಒಂದು ವ್ಯವಸ್ಥೆ ಇದೆ. ಕ್ರಿಮಿನಲ್ ನ್ಯಾಯದಾನ ವ್ಯವಸ್ಥೆಯಲ್ಲಿ ಪೊಲೀಸರನ್ನು ಮುಕ್ತವಾದ ಪರಿಸ್ಥಿತಿಯಲ್ಲಿ ಇಡಬೇಕು. ಶಾಸಕ, ಸಂಸದ, ಪಂಚಾಯಿತಿ ಸದಸ್ಯ, ಅಧ್ಯಕ್ಷರು ಮುಂತಾದವರೆಲ್ಲ ಹೋಗಿ ಪ್ರಶ್ನಿಸಿದರೆ ನಿಷ್ಟಕ್ಷಪಾತವಾದ ತನಿಖೆಯನ್ನು ಪೊಲೀಸರು ನಡೆಸಲು ಸಾಧ್ಯವೇ..? ನಿಮಗೆ ಸಮಸ್ಯೆಯಾದರೆ ಮಾನವ ಹಕ್ಕುಗಳ ಆಯೋಗ ಇದೆ. ಅಲ್ಲಿ ಮನವಿ ನೀಡಬಹುದು ಎಂದು ನ್ಯಾಯಪೀಠ ಕಟು ಶಬ್ದಗಳಿಂದ ಪೂಂಜಾ ನಡೆಯನ್ನು ಟೀಕಿಸಿತು.