-->

"ಪಟ್ಲಧ್ರುವ" ಪ್ರಶಸ್ತಿ ಪುರಸ್ಕೃತರ ಕುರಿತ ವಿಶೇಷ ಲೇಖನ:  ವಿಭಿನ್ನ ಪಾತ್ರ ಚಿತ್ರಣದ "ಕೊಂಡದಕುಳಿ" ಎಂಬ ಆಯಸ್ಕಾಂತ!

"ಪಟ್ಲಧ್ರುವ" ಪ್ರಶಸ್ತಿ ಪುರಸ್ಕೃತರ ಕುರಿತ ವಿಶೇಷ ಲೇಖನ: ವಿಭಿನ್ನ ಪಾತ್ರ ಚಿತ್ರಣದ "ಕೊಂಡದಕುಳಿ" ಎಂಬ ಆಯಸ್ಕಾಂತ!

"ಪಟ್ಲಧ್ರುವ" ಪ್ರಶಸ್ತಿ ಪುರಸ್ಕೃತರ ಕುರಿತ ವಿಶೇಷ ಲೇಖನ: ವಿಭಿನ್ನ ಪಾತ್ರ ಚಿತ್ರಣದ "ಕೊಂಡದಕುಳಿ" ಎಂಬ ಆಯಸ್ಕಾಂತ!







ಈ ವರುಷದ ಯಕ್ಷಧ್ರುವ ಪಟ್ಲ ಮತ್ತು ಉಡುಪಿ ಶ್ರೀ ವಿದ್ಯಾಮಾನ್ಯ ಪ್ರಶಸ್ತಿಗೆ ಭಾಜನರಾದ ಕೊಂಡದ ಕುಳಿಯವರ ಬಗ್ಗೆ ಓರ್ವ ಯಕ್ಷಗಾನ ಸಂಘಟಕನಾಗಿ ಮತ್ತು ಅವರ ಅಭಿಮಾನಿಯಾಗಿ ಒಂದೆರಡು ಅನಿಸಿಕೆಯನ್ನು ತಮ್ಮ ಮುಂದೆ ವ್ಯಕ್ತಪಡಿಸಲು ಇಚ್ಚಿಸುತ್ತೇನೆ.


ನಾನು ಆಗಿನ್ನೂ ಎಸ್‌ಎಸ್‌ಎಲ್‌ಸಿ ಓದುತ್ತಿರುವ ಹುಡುಗ. ಅದು 1988ನೇ ಇಸವಿಯೆಂಬುದು ನನ್ನ ನೆನಪು. ನನ್ನ ಹುಟ್ಟೂರು ವಿಟ್ಲ ಪೇಟೆಯಲ್ಲಿ ನನ್ನ ಸೋದರ ಮಾವನೊಡನೆ ಹೋಗುತ್ತಿರುವಾಗ ಮೈಕದಲ್ಲಿ ಇಂದು ರಾತ್ರಿ ಸಾಲಿಗ್ರಾಮ ಮೇಳದ "ಸಂಪೂರ್ಣ ನಾಗಶ್ರೀ" ಎಂಬ ಯಕ್ಷಗಾನ ಬಯಲಾಟ, ವಿಶೇಷ ಆಕರ್ಷಣೆಯಾಗಿ ಗಾನ ಗಂಧರ್ವ ಕಾಳಿಂಗ ನಾವಡರ "ನೀಲ ಗಗನದೊಳು..." ಹಾಡಿಗೆ ಜ್ಯೂನಿಯರ್ ಚಿಟ್ಟಾಣಿ ಎಂದೇ ಖ್ಯಾತರಾದ ಕೊಂಡದಕುಳಿಯವರ “ನವಿಲು ನಾಟ್ಯ” ಹೀಗೆ ಪ್ರಚಾರ ಭರದಲ್ಲಿ ಸಾಗಿತ್ತು.


ಆಗಿನ್ನೂ ನಾವಡರ ಹಾಡುಗಾರಿಕೆಯನ್ನು ಟೇಪ್ ರೆಕಾರ್ಡರ್‌ನಲ್ಲಿ ಮಾತ್ರ ಕೇಳಿದ್ದೇನೆಯೇ ಹೊರತು, ಯಕ್ಷಗಾನವನ್ನು ಅದುವರೆಗೂ ನೋಡಿರಲಿಲ್ಲ. ಮಾವನಲ್ಲಿ ಇವತ್ತು ರಾತ್ರಿ ಆಟಕ್ಕೆ ಹೋಗೋಣ ಎಂದು ಕೇಳಿದಾಗ, ಅವರಿಗೂ ಆಸಕ್ತಿ ಇದ್ದ ಕಾರಣ ನನ್ನನ್ನೂ ಯಕ್ಷಗಾನ ಬಯಲಾಟಕ್ಕೆ ಕರೆದುಕೊಂಡು ಹೋದರು.


ನನ್ನ ತಲೆಯಲ್ಲಿ ನಾವಡರ "ನೀಲ ಗಗನವೇ.." ರಿಂಗಿಣಿಸುತ್ತಿತ್ತು. ಮಧ್ಯರಾತ್ರಿ ಸುಮಾರು 1.30ಕ್ಕೆ ಕಾಳಿಂಗ ನಾವಡರ ಪ್ರವೇಶವಾಯಿತು. "ನೀಲ ಗಗನದೊಳು..." ಹಾಡಿಗೆ ನರ್ತನ ಮಾಡುವಾಗ, ಶಿಥಿಲ ಪಾತ್ರಧಾರಿ ಕೊಂಡದಕುಳಿ ಎಂಬುದು ಮೈಕ್ ಪ್ರಚಾರದಲ್ಲಿ ತಿಳಿಸಿದ ಕಾರಣ ಏಕಾಗ್ರತೆಯಿಂದ ಅವರ ಅಭಿನಯವನ್ನು ನೋಡುತ್ತಾ ಇದ್ದೆ. ಅವತ್ತಿನ ನಾವಡರ ಹಾಡುಗಾರಿಕೆ ಹಾಗೂ ಕೊಂಡದಕುಳಿಯವರ ನರ್ತನ ಮತ್ತು ಅಭಿನಯ ಅಕ್ಷರಶಃ ನನ್ನನ್ನು ಯಕ್ಷಗಾನದ ‘ಹುಚ್ಚ’ನನ್ನಾಗಿಸಿತ್ತು. ಇವತ್ತು ನಾನು ಯಕ್ಷಗಾನಕ್ಕೆ ಅಳಿಲ ಸೇವೆಗೈಯಲು ಮೂಲ ಕಾರಣವೇ ನಾವಡರು ಮತ್ತು ಕೊಂಡದಕುಳಿಯವರು.


ಸುಮಾರು 35 ವರ್ಷಗಳಿಂದ ಅವರ ಎಲ್ಲಾ ಪಾತ್ರಗಳನ್ನು ನೋಡುತ್ತಾ ಬಂದಿದ್ದೇನೆ. ಪ್ರಥಮದಲ್ಲಿ ಚಿಟ್ಟಾಣಿಯವರ ನರ್ತನ, ಮಹಾಬಲ ಹೆಗಡೆಯವರ ರೌದ್ರ ಮತ್ತು ಗತ್ತುಗಾರಿಕೆ, ಶಂಭು ಹೆಗಡೆಯವರ ಭಾವಾಭಿನಯ ಮತ್ತು ಕರುಣಾರಸ ಮತ್ತು ತನ್ನಲ್ಲಿರುವ ಪ್ರತಿಭೆಯ ಮೂಲಕ ಪಾತ್ರಗಳನ್ನು ಕಟ್ಟಿಕೊಡುತ್ತಿದ್ದರು.


ಅದು ಅವರಿಗೇ ಸಾಕೆನಿಸಿದಾಗ, ಅವರೊಳಗಿರುವ "ಸೃಜನಶೀಲ ಕಲಾವಿದ" ಜಾಗೃತಗೊಳ್ಳತೊಡಗಿದ. ಸುಮಾರು 2000ನೇ ಇಸವಿಯ ನಂತರ, ಪ್ರತಿಯೊಂದು ಪಾತ್ರಗಳನ್ನು ಸಂಪ್ರದಾಯ ಮತ್ತು ಪರಂಪರೆಗೆ ಕಿಂಚಿತ್ತು ಚ್ಯುತಿ ಬರದಂತೆ, ತನ್ನದೇ ಕಲ್ಪನೆಯಲ್ಲಿ ವಿಭಿನ್ನವಾಗಿ ಅಭಿನಯಿಸತೊಡಗಿದರು.


‘ಮಾಗದ ವಧೆ’ಯ ಮಾಗದ, ‘ಕೀಚಕ ವಧೆ’ಯ ವಲಲ, ಸ್ಮಶಾನದ ಹರೀಶ್ಚಂದ್ರ, ಸತ್ಯವಾನ ಸಾವಿತ್ರಿಯ ಯಮ, ಚಂದ್ರಹಾಸ ಚರಿತ್ರೆಯ ದುಷ್ಟಬುದ್ಧಿ, ನಳ ಚರಿತ್ರೆಯ ಬಾಹುಕ, ಪಟ್ಟಾಭಿಷೇಕದ ದಶರಥ….. ಹೀಗೆ ಪ್ರತಿಯೊಂದು ಪಾತ್ರಗಳನ್ನು ವಿಭಿನ್ನವಾಗಿ ಅಭಿನಯಿಸಿ, ಪ್ರೇಕ್ಷಕರನ್ನು, ಆಯಸ್ಕಾಂತದಂತೆ ಆಕರ್ಷಿಸತೊಡಗಿದರು. ಅವರ ಪಾತ್ರಗಳು ನನ್ನ ಮೇಲೆ ಎಷ್ಟು ಪ್ರಭಾವ ಬೀರಿತೆಂದರೆ, ನನಗೆ ಮದುವೆಯಾದ ಹೊಸತರಲ್ಲಿ ಪತ್ನಿಗೆ ಸುಳ್ಳು ಹೇಳಿ ಕೊಂಡದಕುಳಿ ಅವರ ಪಾತ್ರಗಳನ್ನು ನೋಡಲು ದೂರದ ಬೆಂಗಳೂರು, ಉಡುಪಿ, ಕುಂದಾಪುರ, ಶಿರಸಿ, ಹೊನ್ನಾವರ, ಕುಮಟಾ ಕಡೆಗೆ ಹೋಗಿ ಅಲ್ಲಿ ಆಯೋಜಿಸಲಾಗಿದ್ದ ಯಕ್ಷಗಾನ ಪ್ರಸಂಗವನ್ನು ಕಣ್ಣಾರೆ ವೀಕ್ಷಿಸಿ ಆನಂದಿಸಿ ಬರುತ್ತಿದ್ದೆ. ಅಲ್ಲಿ ನೋಡಿದರೆ ನನ್ನಂತೆಯೇ ತಮ್ಮ ತಮ್ಮ ಹೆಂಡತಿಯಂದಿರಿಗೆ ಸುಳ್ಳು ಹೇಳಿ ಸುಳ್ಯ, ಪುತ್ತೂರು, ಉಜಿರೆ, ಮಂಗಳೂರಿನ ಕಡೆಯಿಂದ ಬಂದವರ ಸಂಖ್ಯೆಯೇ ಹೆಚ್ಚಿತ್ತು.


ಕೆಲವು ಗಣ್ಯರು, ಪ್ರತಿಷ್ಠಿತರು ಕೊಂಡದಕುಳಿ ಪಾತ್ರ ಚಿತ್ರಣಕ್ಕೆ ಆಕರ್ಷಿತರಾಗಿ ದೂರದ ಬೆಂಗಳೂರಿನಿಂದ ಮಂಗಳೂರಿಗೆ ಹಾಗೂ ಮಂಗಳೂರಿನಿಂದ ಬೆಂಗಳೂರಿಗೆ ವಿಮಾನದಲ್ಲಿ ಹೋಗಿ ಅವರ ಪ್ರದರ್ಶನವನ್ನು ನೋಡಿ ಬಂದುದನ್ನು ಕಂಡಿದ್ದೇನೆ. ಇವರ ಅಭಿಮಾನಿಗಳಲ್ಲಿ ಹೆಚ್ಚಿನವರು ಸಮಾಜದಲ್ಲಿ ಪ್ರತಿಷ್ಠಿತರು ಎನಿಸಿಕೊಂಡಂತಹ ಸ್ವಾಮೀಜಿಗಳು, ವಿದ್ವಾಂಸರು, ವೈದ್ಯರು, ಪ್ರಾಂಶುಪಾಲರು, ಉಪನ್ಯಾಸಕರು, ಉದ್ಯಮಿಗಳು, ಎಂಜಿನಿಯರ್ ಗಳು, ವಕೀಲರುಗಳೂ ಒಳಗೊಂಡಿರುತ್ತಾರೆ.


ಇನ್ನು ಇವರ ಪಾತ್ರಗಳ ಬಗ್ಗೆ ಹೇಳುವುದಾದರೆ, ಕಥಾ ನಾಯಕನಾಗಲೀ, ಖಳ ನಾಯಕನಾಗಲೀ, ಕೃಷ್ಣನಾಗಲೀ, ರಾಮನಾಗಲೀ, ಋಷಿಯಾಗಲೀ, ಸೇವಕನಾಗಲೀ…. ಹೀಗೆ ಯಾವುದೇ ಪಾತ್ರಕ್ಕೆ ಒಪ್ಪುವ ಇವರ ಮುಖವೇ ಪ್ರೇಕ್ಷಕರನ್ನು ಆಕರ್ಷಿಸುತ್ತಿತ್ತು. ಅದರೊಟ್ಟಿಗೆ ವೇಷಗಾರಿಕೆ ಮತ್ತು ಲಯಗಾರಿಕೆಯಲ್ಲಿ ಇವರಿಗಿರುವ ಪ್ರಭುತ್ವ ಎಲ್ಲರನ್ನೂ ಮೀರಿಸುವಂಥದ್ದು. ನನ್ನ ಹೊಟೇಲ್ ಭಾಷೆಯಲ್ಲಿ ಹೇಳುವುದಾದರೆ ಇವರೊಬ್ಬ ಯಕ್ಷಗಾನದ “ನಳಪಾಕ ತಜ್ಞ”


ಕೊಂಡದಕುಳಿಯವರ ಪಾತ್ರಗಳು ಮನಸ್ಸಿಗೆ ಮತ್ತು ಬುದ್ದಿಗೆ ಎರಡಕ್ಕೂ ಸಂತೋಷವನ್ನು ನೀಡುವಂತದ್ದು. ನೂರಾರು ಪ್ರೇಕ್ಷಕರಿಗೆ ಸಂತೋಷವನ್ನು ನೀಡುವುದು ದೇವತಾರಾಧನೆಗೆ ಸಮ ಎಂಬುದು ಪ್ರಾಜ್ಞರ ಅಂಬೋಣ. ಮನಸ್ಸು ಮತ್ತು ದೇಹ ಬಳಲಿದಾಗ ಇವರ ಪಾತ್ರಗಳನ್ನು ನೋಡಿ ಬಂದರೆ ಹೊಸ ಹುರುಪು, ಹುಮ್ಮಸ್ಸು ನನ್ನಲ್ಲಿ ಜಾಗೃತವಾಗುತ್ತಿತ್ತು.


ನೀಲ್ಕೋಡು ಶಂಕರ ಹೆಗಡೆ ಮತ್ತು ಪ್ರಸನ್ನ ಶೆಟ್ಟಿಗಾರ್ ರಂತಹ ಯುವ ಕಲಾವಿದರೂ ಕೊಂಡದಕುಳಿಯವರಿಂದ ಪ್ರಭಾವಿತರಾಗಿ ಯಕ್ಷಗಾನಕ್ಕೆ ಬಂದವರು.


ಅಭಿನಯ, ಮಾತುಗಾರಿಕೆ ಮತ್ತು ನಾಟ್ಯಗಾರಿಕೆ… ಹೀಗೆ ಯಕ್ಷಗಾನದ ಯಾವುದೇ ವಿಭಾಗದಲ್ಲಿ ಅತಿರೇಕವೆನಿಸದ ಪಾತ್ರ ಚಿತ್ರಣವೇ ಇವರ ಹೆಚ್ಚುಗಾರಿಕೆ. ದೈವೀದತ್ತವಾದ ಸ್ವರಭಾರದ ಕೊರತೆಯನ್ನು ಹೊರತುಪಡಿಸಿದರೆ, ಇವರೊಬ್ಬ ಪರಿಪೂರ್ಣ ಕಲಾವಿದ ಎಂದರೆ ಅತಿಶಯೋಕ್ತಿ ಎನಿಸದು. ಶಿಸ್ತು ಮತ್ತು ಅಧ್ಯಯನ ಶೀಲತೆಯನ್ನು ಮೈಗೂಡಿಸಿಕೊಂಡಿರುವ ಇವರು, ಈಗಿನ ಯುವ ಕಲಾವಿದರಿಗೆ ಒಬ್ಬ ರೋಲ್ ಮಾಡೆಲ್.


ಹಲವಾರು ಸಂಸಾರ ತಾಪತ್ರಯಗಳು ಮತ್ತು ಆರೋಗ್ಯದ ಸಮಸ್ಯೆಯ ನಡುವೆಯೂ ಯಕ್ಷಗಾನವನ್ನು ದೇವತಾರಾಧನೆಯೆಂದೇ ತಿಳಿದು ಅಭಿನಯಿಸುವ ಕೊಂಡದಕುಳಿಯವರು ನಿವೃತ್ತಿಯ ಅಂಚಿನಲ್ಲಿ ಇದ್ದಾರೆ. ನನ್ನಂಥಾ ನೂರಾರು ಅಭಿಮಾನಿಗಳು ಮತ್ತು ಪ್ರೇಕ್ಷಕರಿಗೆ ಮುದವನ್ನು ನೀಡಿದ ಕೊಂಡದಕುಳಿಯವರು ನಿವೃತ್ತಿಯ ಅಂಚಿನಲ್ಲಿ ಧನ್ಯತಾ ಭಾವವನ್ನು ಅನುಭವಿಸಲಿ ಎಂಬುದೇ ಈ ಲೇಖನದ ಸದಾಶಯ.


“ವಿದ್ಯಾಮಾನ್ಯ ಪ್ರಶಸ್ತಿ”ಯನ್ನು ಕೊಡಮಾಡಿದ ಪಲಿಮಾರು ಮಠದ ಯತಿವರ್ಯರಿಗೂ, ಪಟ್ಲ ಪ್ರಶಸ್ತಿಯನ್ನು ಕೊಡ ಮಾಡಿದ ಯಕ್ಷಧ್ರುವ ಪಟ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ.


ಇನ್ನಷ್ಟು ವಿಭಿನ್ನ ಪಾತ್ರ ಚಿತ್ರಣಗಳನ್ನು ಪ್ರೇಕ್ಷಕರಿಗೆ ನೀಡಿ, ಇನ್ನು ಹಲವಾರು ವರುಷಗಳ ಕಾಲ ಅಭಿನಯಿಸುವ ಶಕ್ತಿಯನ್ನು ಕಲಾಮಾತೆಯು ಅವರಿಗೆ ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತಾ ಈ ಲೇಖನಕ್ಕೆ ಮಂಗಲವನ್ನು ಹಾಡುತ್ತಿದ್ದೇನೆ.


ಯಕ್ಷಗಾನಂ ಗೆಲ್ಗೆ

ಲೇಖನ: "ರಾಜಣ್ಣ", ಮಂಗಳೂರು










Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99