ಈ ಬಾರಿ 2004ರ ಫಲಿತಾಂಶ; ಬಿಜೆಪಿ ಧೂಳೀಪಟ- ಜೈರಾಮ್ ರಮೇಶ್
ಈ ಬಾರಿ 2004ರ ಫಲಿತಾಂಶ; ಬಿಜೆಪಿ ಧೂಳೀಪಟ- ಜೈರಾಮ್ ರಮೇಶ್
2014ರಲ್ಲಿ ನರೇಂದ್ರ ಮೋದಿ ಪರ ಅಲೆ ಇತ್ತು. 2019ರಲ್ಲಿ ಪುಲ್ವಾಮ ಘಟನೆಯನ್ನು ಬಿಜೆಪಿ ಬಳಸಿಕೊಂಡು ಚುನಾವಣಾ ಲಾಭ ಮಾಡಿಕೊಂಡಿತು. ಆದರೆ, ಈ ಬಾರಿ ದೇಶದಲ್ಲಿ ಯಾವುದೇ ಮೋದಿ ಅಲೆ ಇಲ್ಲ. ಈ ಬಾರಿ 2004ರ ಫಲಿತಾಂಶ ಹೊರಬೀಳಲಿದೆ. ಬಿಜೆಪಿ ಧೂಳೀಪಟವಾಗಲಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಭವಿಷ್ಯ ನುಡಿದಿದ್ದಾರೆ.
ನಾನು ಈ ವರೆಗೆ ಎಂಟು ರಾಜ್ಯಗಳಲ್ಲಿ ಪ್ರವಾಸ ಮಾಡಿದ್ದೇನೆ. ಈ ಹಿಂದಿನ ಎರಡು ಲೋಕಸಭಾ ಚುನಾವಣೆಯಲ್ಲಿ ಉತ್ತರ ಭಾರತದಲ್ಲಿ ಬಿಜೆಪಿ ಗರಿಷ್ಠ ಸ್ಥಾನ ಗಳಿಸಿತ್ತು. ಆದರೆ, ಈ ಬಾರಿ ಬಿಜೆಪಿ ಸ್ಥಾನ ಗಳಿಕೆಯಲ್ಲಿ ಗಣನೀಯ ಇಳಿಕೆ ಕಾಣಲಿದೆ ಎಂದು ಅವರು ವಿಶ್ಲೇಷಿಸಿದರು.
ದಕ್ಷಿಣ ಭಾರತದಲ್ಲಂತೂ ಬಿಜೆಪಿ ದೊಡ್ಡ ಹಿನ್ನಡೆ ಕಾಣಲಿದೆ. ಹೀಗಾಗಿ, ಇಂಡಿಯಾ ಮೈತ್ರಿಕೂಟ ಬಹುಮತ ಗಳಿಸಲಿದೆ. ಕಾಂಗ್ರೆಸ್ 2004ರಂತೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಜೈರಾಮ್ ರಮೇಶ್ ಹೇಳಿದರು.
ಈಶಾನ್ಯದಲ್ಲಿ ಕಾಂಗ್ರೆಸ್ ಶೂನ್ಯ, ಎಲ್ಲೂ ಅಧಿಕಾರದಲ್ಲಿ ಇಲ್ಲ. ಆದರೂ, ಅಲ್ಲಿನ ಜನತೆ ಕಾಂಗ್ರೆಸ್‌ನ್ನು ಬೆಂಬಲಿಸಲು ನಿರ್ಧರಿಸಿದ್ಧಾರೆ. ರಾಜಸ್ಥಾನದಲ್ಲೂ ಕೈಗೆ ಹೆಚ್ಚಿನ ಮತಗಳು ಲಭಿಸಲಿದೆ. ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ಇಂಡಿಯಾ ಮೈತ್ರಿಕೂಟ ಮುನ್ನಡೆ ಸಾಧಿಸಲಿದೆ ಎಂದು ಹೇಳಿದರು.
10 ವರ್ಷಗಳಲ್ಲಿ ಮೋದಿ ಸಾಧನೆ ಶೂನ್ಯ. ಅದಕ್ಕಾಗಿಯೇ ಅವರು ತಮ್ಮ ಸಾಧನೆಯ ಬಗ್ಗೆ ಏನೂ ಹೇಳುತ್ತಿಲ್ಲ. ಮತೀಯ, ದ್ವೇಷಭರಿತ ವಿಚಾರಗಳನ್ನು ಪ್ರಸ್ತಾಪಿಸಿ ಮತ ಧ್ರುವೀಕರಣಕ್ಕೆ ಮೋದಿ ಪ್ರಯತ್ನಿಸುತ್ತಿದ್ದಾರೆ. ಇದು ಅವರ ಹತಾಶೆಯನ್ನು ತೋರಿಸುತ್ತಿದೆ ಎಂದು ಆರೋಪಿಸಿದರು.