ಖಾಲಿ ಚೊಂಬು ಕೊಟ್ಟವರನ್ನು ಓಡಿಸಿ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಆಕ್ರೋಶ
ಖಾಲಿ ಚೊಂಬು ಕೊಟ್ಟವರನ್ನು ಓಡಿಸಿ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಆಕ್ರೋಶ
ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯ, ಅವಮಾನ ಮತ್ತು ಮಲತಾಯಿ ಧೋರಣೆ ತೋರಿಸುತ್ತಲೇ ಬಂದಿದ್ದರೂ ರಾಜ್ಯದ ಬಿಜೆಪಿ ಸಂಸದರು ತುಟಿ ಪಿಟಿಕ್ ಅನ್ನಲಿಲ್ಲ. ಈ ಧೋರಣೆ ತಳೆದ ಜನವಿರೋಧಿ ಸಂಸದರನ್ನು ಮತ್ತು ರಾಜ್ಯ ವಿರೋಧಿಯಾಗಿ ವರ್ತನೆ ತೋರಿದ ಕೇಂದ್ರದ ಬಿಜೆಪಿ ಸರ್ಕಾರವನ್ನು ಹೊಡೆದೋಡಿಸಬೇಕಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಕೊಪ್ಪಳದ ಭಾಗ್ಯನಗರದಲ್ಲಿ ಕಾಂಗ್ರೆಸ್ ಪರ ಪ್ರಚಾರ ಭಾಷಣ ಮಾಡಿದ ಅವರು, ಒಂದು ತಿಂಗಳ ಹಿಂದೆ ರಾಜ್ಯಕ್ಕೆ ನಯಾ ಪೈಸೆ ಬಾಕಿ ಇಲ್ಲ ಎಂದು ಕೇಂದ್ರ ಸರ್ಕಾರದ ಹಣಕಾಸು ಸಚಿವರೇ ಹೇಳಿದ್ದರು. ಆದರೆ, ಸುಪ್ರೀಂ ಕೋರ್ಟ್ ಮೊರೆ ಹೋದ ಬಳಿಕ ಈಗ ಬರ ಪರಿಹಾರ ಬಂದದ್ದು ಹೇಗೆ..? ಎಂದು ಪ್ರಶ್ನಿಸಿದರು.
ಕೇಂದ್ರ ಸರಣಿ ಅನ್ಯಾಯಗಳನ್ನು ಮಾಡಿದರೂ ರಾಜ್ಯದ ಸಂಸದರು ಉಸಿರೆತ್ತಲಿಲ್ಲ. ಮೋದಿ ಮತ್ತು ಅಮಿತ್ ಶಾ ಎದುರು ಮಾತನಾಡುವ ಧೈರ್ಯ ಮತ್ತು ತಾಕತ್ತು ಬಿಜೆಪಿ ಸಂಸದರಿಗೆ ಇಲ್ಲ ಎಂದು ಕೃಷ್ಣ ಬೈರೇಗೌಡ ಹೇಳಿದರು.
ಈಗಿನ ಲೋಕಸಭಾ ಚುನಾವಣೆಯಲ್ಲಿ ನಿಮ್ಮೆಲ್ಲರ ಸಂಸಾರ, ಬದುಕು, ಭವಿಷ್ಯ ಅಡಗಿದೆ. ಪ್ರಜಾಪ್ರಭುತ್ವ ಉಳಿಯಲು ಕಾಂಗ್ರೆಸ್ ಗೆ ಮತ ಹಾಕಬೇಕು. ಎಲ್ಲದರ ಮೇಲೂ ತೆರಿಗೆ ಹಾಕಿ ಕುಬೇರ ಬದುಕು ಮತ್ತಷ್ಟು ಶ್ರೀಮಂತ ಮಾಡಿದ ಮತ್ತು ಬಡವನ್ನು ಇನ್ನಷ್ಟು ಬಡವರನ್ನಾಗಿ ಮಾಡಿದ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎಂದು ಅವರು ಆಗ್ರಹಿಸಿದರು.