
ಬ್ರೋಕರ್‌ಗಳ ದರ್ಬಾರು, ಭ್ರಷ್ಟ ಕೂಟದ್ದೇ ಕಾರ್ಬಾರು: ಮಂಗಳೂರು ಮೂಡಾ ಕಚೇರಿಗೆ ಲೋಕಾ ಶಾಕ್!
ಬ್ರೋಕರ್‌ಗಳ ದರ್ಬಾರು, ಭ್ರಷ್ಟ ಕೂಟದ್ದೇ ಕಾರ್ಬಾರು: ಮಂಗಳೂರು ಮೂಡಾ ಕಚೇರಿಗೆ ಲೋಕಾ ಶಾಕ್!
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಮಧ್ಯವರ್ತಿಗಳು, ಬ್ರೋಕರ್‌ಗಳದ್ದೇ ದರ್ಬಾರು ನಡೆಯೋದು. ಅದನ್ನು ಸಾಕಿ ಪೋಷಿಸುವಂತಹ ಅಧಿಕಾರಿಗಳ ಭ್ರಷ್ಟ ಕೂಟದ್ದೇ ಕಾರ್ಬಾರು ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಲೋಕಾಯುಕ್ತ ದಿಢೀರ್ ಭೇಟಿ ಮೂಲಕ ಮಂಗಳೂರು ಮೂಡಾ ಕಚೇರಿಗೆ ಶಾಕ್ ನೀಡಿದ್ದು, ರಾತ್ರಿ ಸುಮಾರು 18 ಗಂಟೆಗಳ ಕಾಲ ಸುದೀರ್ಘ ಪರಿಶೀಲನೆ ನಡೆಸಿದೆ.
ಏನಾಗುತ್ತಿದೆ ಮೂಡ ಕಚೇರಿಯಲ್ಲಿ!?
ಮಂಗಳೂರು ಮೂಡ ಕಚೇರಿಯಲ್ಲಿ ಸಾರ್ವಜನಿಕರ ಕಡತಗಳು ವಿಲೇವಾರಿಯಾಗುತ್ತಿಲ್ಲ ಹಾಗೂ ಕಛೇರಿಯಲ್ಲಿ ಮಧ್ಯವರ್ತಿಗಳದ್ದೇ ದರ್ಬಾರು ಎಂಬ ದೂರುಗಳು ಸಾರ್ವಜನಿಕ ವಲಯದದಿಂದ ಬಲವಾಗಿ ಕೇಳಿಬಂದಿತ್ತು.
ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಗೆ 13.03.2024 ರಂದು ಸಂಜೆ ಅನಿರೀಕ್ಷಿತ ಭೇಟಿ ನೀಡಿದರು.
ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆ...!
ಅಧಿಕಾರಿಗಳು ಸುಮಾರು 18 ಗಂಟೆಗಳ ಸುದೀರ್ಘಕಾಲ ಪರಿಶೀಲನೆ ನಡೆಸಿದರು. ಕಡತಗಳ ಪರಿಶೀಲನೆ ನಡೆಸಿದಾಗ ಕಚೇರಿಯ ಅಧಿಕಾರಿಗಳಲ್ಲಿ ಮತ್ತು ಹಲವಾರು ವ್ಯಕ್ತಿಗಳಲ್ಲಿ ದೊಡ್ಡ ಪ್ರಮಾಣದ ಹಣವಿದ್ದು, ಈ ಬಗ್ಗೆ ಯಾವುದೇ ಸಮರ್ಪಕ ಉತ್ತರ ಸಿಕ್ಕಿರುವುದಿಲ್ಲ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಅಷ್ಟೇ ಅಲ್ಲ ಮೂಡ ಕಚೇರಿಯಲ್ಲಿ ಹಣದ ಬ್ಯಾಗ್ ಪತ್ತೆಯಾಗಿರುವುದಾಗಿರುತ್ತದೆ. ಪರಿಶೀಲನೆ ನಡೆಸುತ್ತಿರುವ ವೇಳೆ ಹಲವು ಸಾರ್ವಜನಿಕರು ಮೂಡ ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಕುರಿತು ಹಾಗೂ ಕಚೇರಿಯಲ್ಲಿ ಅಧಿಕಾರಿಗಳು ನೀಡುತ್ತಿರುವ ಕಿರುಕುಳ ಕುರಿತು ಹೇಳಿಕೊಂಡಿರುತ್ತಾರೆ.
ಪರಿಶೀಲನೆ ಸಂದರ್ಭ ದೀರ್ಘಕಾಲದಿಂದ ವಿಲೇವಾರಿಯಾಗದ ಹಲವಾರು ಅರ್ಜಿದಾರರ ಕಡತಗಳು ಸಿಕ್ಕಿರುತ್ತದೆ. ಅಧಿಕಾರಿಗಳು ಬ್ರೋಕರ್ ಗಳೊಡನೆ ಫೋನ್ ಮುಖಾಂತರ ಹೊಂದಾಣಿಕೆ ಮಾಡಿಕೊಂಡು ಕಡತ ವಿಲೇವಾರಿ ಮಾಡುತ್ತಿರುವುದಾಗಿ ಸಾಕ್ಷಿ ದೊರೆತಿರುತ್ತದೆ. ಈ ಹಿನ್ನಲೆಯಲ್ಲಿ ಮೂಡ ಕಛೇರಿ ಜಾಲದ ಬಗ್ಗೆ ತನಿಖೆ ಮುಂದುವರೆದಿರುತ್ತದೆ.
ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಶ್ರೀ ಸಿ.ಎ. ಸೈಮನ್ ಇವರ ಮಾರ್ಗದರ್ಶನದಲ್ಲಿ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಚಲುವರಾಜು, ಡಾ. ಗಾನ ಪಿ ಕುಮಾರ್, ಹಾಗೂ ಪೊಲೀಸ್ ನಿರೀಕ್ಷಕರಾದ ಶ್ರೀ ಎ. ಅಮಾನುಲ್ಲ, ಶ್ರೀ ಸುರೇಶ್ ಕುಮಾರ್ ಪಿ ಇವರು ಸಿಬ್ಬಂದಿ ಜೊತೆ ಕಾರ್ಯಾಚರಣೆ ನಡೆಸಿದ್ದರು.