
ಲೋಕಸಭಾ ಚುನಾವಣೆ: ಬಿರುಸಿನ ಚಟುವಟಿಕೆ- ಇಂದಿನ ಅಪ್‌ಡೇಟ್ (20-03-2024)
ಲೋಕಸಭಾ ಚುನಾವಣೆ: ಬಿರುಸಿನ ಚಟುವಟಿಕೆ- ಇಂದಿನ ಅಪ್‌ಡೇಟ್ (20-03-2024)
1- ಬಿಜೆಪಿ ವಿರುದ್ಧ ಎಚ್‌ಡಿ ಕುಮಾರಸ್ವಾಮಿ ಅಸಮಾಧಾನ- ಎನ್‌ಡಿಎ ಮೈತ್ರಿಯಲ್ಲಿ ಬಿರಿದಿದೆ ಒಡಕು
ಸೀಟು ಹಂಚಿಕೆಯಲ್ಲಿ ಬಿಜೆಪಿ ನಾಯಕರ "ದೊಡ್ಡಣ್ಣ"ನ ಪ್ರವೃತ್ತಿಗೆ ಜೆಡಿಎಸ್‌ನಲ್ಲಿ ಅಸಮಾಧಾನ ಕಂಡುಬಂದಿದೆ. ಮಾಜಿ ಮುಖ್ಯಮಂತ್ರಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಸ್ವತಃ ತನ್ನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಚಿಂತೆಗೆ ಕಾರಣವಾಗಿರುವುದು ಕೋಲಾರ ಮತ್ತು ತುಮಕೂರು ಕ್ಷೇತ್ರದಿಂದ. ಅದೇ ರೀತಿ. ಹಾಸನ ಮತ್ತು ಮಂಡ್ಯದಲ್ಲೂ ಪರ್ಯಾಯ ಅಭ್ಯರ್ಥಿಗಳ ಭೀತಿ ಜೆಡಿಎಸ್‌ಗೆ ಕಾಡುತ್ತಿದೆ.
2 ಗೀತಾ ಶಿವರಾಜ್‌ಕುಮಾರ್‌ಗೆ ನಿರ್ಮಾಪಕರ ಬೆಂಬಲ
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್‌ಗೆ ನಿರ್ಮಾಪಕರ ಬೆಂಬಲ ಘೋಷಿಸಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (KFCC) ಅಧ್ಯಕ್ಷ ಎನ್.ಎಂ. ಸುರೇಶ್ ಮಾತನಾಡಿ ದೊಡ್ಮನೆ ಕುಟುಂಬ ಚಿತ್ರೋದ್ಯಮದ ಆಸ್ತಿ ಎಂದು ಹೇಳಿ ಬೆಂಬಲ ಸೂಚಿಸಿದರು. ಸಾರಾ ಗೋವಿಂದು, ಚೆನ್ನೇಗೌಡ, ಥಾಮಸ್ ಡಿಸೋಜ ಅವರೂ ಉಪಸ್ಥಿತರಿದ್ದರು. ಪ್ರಚಾರದಲ್ಲಿ ಶಿವರಾಜ್ ಕುಮಾರ್ ಅವರೂ ಭಾಗಿಯಾಗಲಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ ಅವರನ್ನು ಬದಲಿಸಲು ಅಮಿತ್ ಶಾ ಸೂಚನೆ!
ಹಾಸನ ಕ್ಷೇತ್ರವನ್ನು ಬಿಜೆಪಿ ಜೆಡಿಎಸ್‌ಗೆ ಬಿಟ್ಟುಕೊಟ್ಟಿದೆ. ಆದರೆ, ಪ್ರಜ್ವಲ್ ಅವರ ಬದಲು ಬೇರೆ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಜೆಡಿಎಸ್‌ಗೆ ಅಮಿತ್ ಶಾ ಸೂಚಿಸಿದ್ದಾರೆ. ಬಿಜೆಪಿಯ ಮಾಜಿ ಶಾಸಕ ಪ್ರೀತಮ್ ಗೌಡ, ಹಿರಿಯ ನಾಯಕ ಎ.ಟಿ. ರಾಮಸ್ವಾಮಿ ಅವರು ಪ್ರಜ್ವಲ್ ಸ್ಪರ್ಧೆಗೆ ಪ್ರಬಲ ವಿರೋಧ ವ್ಯಕ್ತಪಡಿಸಿದ್ದಾರೆ.
ಒಂದೋ ದೇವೇಗೌಡು, ಇಲ್ಲವೇ ಕುಮಾರಸ್ವಾಮಿ ಇಲ್ಲಿ ಸ್ಪರ್ಧಿಸಲಿ. ಇಲ್ಲವೇ ಬಿಜೆಪಿಗೆ ಕ್ಷೇತ್ರವನ್ನು ಬಿಟ್ಟುಕೊಡಲಿ ಎಂದು ಬಿಜೆಪಿ ಒತ್ತಡ ಹೇರಿದೆ.
ಕಾಂಗ್ರೆಸ್‌ನಿಂದ ಮತ್ತೆರಡು ಗ್ಯಾರಂಟಿ ಘೋಷಣೆ
ಕಾಂಗ್ರೆಸ್ ಈಗಾಗಲೇ ಹಲವು ಗ್ಯಾರಂಟಿಗಳನ್ನು ಘೋಷಿಸಿದೆ. ರೈತ ನ್ಯಾಯ, ಯುವ ನ್ಯಾಯ ಮತ್ತು ನಾರಿ ನ್ಯಾಯ ಎಂಬ ಗ್ಯಾರಂಟಿಗಳನ್ನು ಘೋಷಿಸಿತ್ತು. ಇದರ ಜೊತೆಗೆ ಶ್ರಮಿಕ ನ್ಯಾಯ ಮತ್ತು ಹಿಸ್ಸೇದಾರಿ ನ್ಯಾಯ ಎಂಬ ಎರಡು ಹೊಸ ಗ್ಯಾರಂಟಿಗಳನ್ನು ಕೈ ಪಕ್ಷ ಘೋಷಿಸಿದೆ.
ಶ್ರಮಿಕ ವರ್ಗಕ್ಕೆ ನರೇಗ ಗ್ಯಾರಂಟಿ ಕೂಲಿ, ಆರೋಗ್ಯ, ವಿಮೆ ಹಾಗೂ ಇತರ ಘೋಷಣೆಗಳ ಭರವಸೆ ನೀಡಿದೆ.
ಹಿಸ್ಸೇದಾರಿ ನ್ಯಾಯದಲ್ಲಿ ಜಾತಿಗಣತಿ, ಸಾಮಾಜಿಕ, ಆರ್ಥಿಕ ಪ್ರಗತಿಯನ್ನು ಭರವಸೆಯಾಗಿ ನೀಡಿದೆ.
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಕಾಂಗ್ರೆಸ್‌ಗೆ ಹತ್ತಿರ?
ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಮುನಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಕಮಲ ಪಾಳಯಕ್ಕೆ ವಿದಾಯ ಹೇಳಲಿದ್ದಾರೆಯೇ..? ಈ ಬಗ್ಗೆ ಖಚಿತ ನಿರ್ಧಾರವನ್ನು ಪ್ರಕಟಿಸುವುದಾಗಿ ಡಿವಿಎಸ್ ಹೇಳಿದ್ದಾರೆ.
ಟಿಕೆಟ್ ಮಿಸ್ ಆಗಿ ಬೇಸರಗೊಂಡಿದ್ದು ನಿಜ. ಅದೇ ರೀತಿ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹಿತ ಕಾಂಗ್ರೆಸ್ ನಾಯಕರು ಸಂಪರ್ಕಿಸಿದ್ದು ನಿಜ ಎಂದು ಡಿವಿ ಹೇಳಿದ್ಧಾರೆ.
ಬಿಹಾರದಲ್ಲಿ ಸೀಟು ಹಂಚಿಕೆ: ಬಿಜೆಪಿ ಮೇಲುಗೈ
ಬಿಹಾರದಲ್ಲಿ ಬಿಜೆಪಿ ಪಟ್ಟು ಮೇಲುಗೈ ಸಾಧಿಸಿದೆ. ಬಿಜೆಪಿಗೆ 17 ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಅವಕಾಶ ಸಿಕ್ಕಿದೆ. 16ರಲ್ಲಿ ಜೆಡಿಯು ಸ್ಪರ್ಧೆ ನಡೆಸಲಿದೆ. ಉಳಿದ 5 ಕ್ಷೇತ್ರಗಳಲ್ಲಿ ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ ಸ್ಪರ್ಧೆ ನಡೆಸಲಿದೆ.
ಇವಿಎಂ, ಇಡಿ, ಐಟಿ ಇಲ್ಲದೆ ಮೋದಿ ಜಯ ಗಳಿಸಲಾರರು: ರಾಹುಲ್ ಟೀಕಾಸ್ತ್ರ
ವಿದ್ಯುನ್ಮಾನ ಮತ್ರಯಂತ್ರ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆಯನ್ನು ಅಸ್ತ್ರ ಮಾಡಿಕೊಂಡ ಪ್ರಧಾನಿ ನರೇಂದ್ರ ಮೋದಿ, ಈ ಶಕ್ತಿಗಳಿಲ್ಲದೆ ಚುನಾವಣೆಯಲ್ಲಿ ಜಯ ಗಳಿಸಲಾರರು ಎಂದು ಟೀಕಾ ಪ್ರಹಾರ ಮಾಡಿದ್ಧಾರೆ.