
ನೋಟು ಬ್ಯಾನಿನಿಂದ "ಬ್ಲ್ಯಾಕ್ ಮನಿ" ವೈಟ್ ಆಯಿತೇ..?: ಅಮಾನ್ಯೀಕರಣದ ಸಿಂಧುತ್ವವನ್ನೇ ಪ್ರಶ್ನಿಸಿದ ನ್ಯಾ. ಬಿ. ವಿ. ನಾಗರತ್ನ!
ನೋಟು ಬ್ಯಾನಿನಿಂದ "ಬ್ಲ್ಯಾಕ್ ಮನಿ" ವೈಟ್ ಆಯಿತೇ..?: ಅಮಾನ್ಯೀಕರಣದ ಸಿಂಧುತ್ವವನ್ನೇ ಪ್ರಶ್ನಿಸಿದ ನ್ಯಾ. ಬಿ. ವಿ. ನಾಗರತ್ನ!
ನೋಟು ಬ್ಯಾನ್ ಮಾಡುವ ಕಪ್ಪುಹಣವನ್ನು ಸಂಪೂರ್ಣವಾಗಿ ಮೂಲೋತ್ಪಾಟನೆ ಮಾಡಲಾಯಿತೇ..? ಬ್ಲ್ಯಾಕ್ ಮನಿ ವೈಟ್ ಆಯಿತೇ..? ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ. ವಿ. ನಾಗರತ್ನ ಕೇಂದ್ರ ಸರ್ಕಾರದ ನಡೆಯನ್ನು ಪ್ರಶ್ನೆ ಮಾಡಿದ್ದಾರೆ.
ಬ್ಯಾನ್ ಮಾಡಿದ ನಂತರ ಶೇ. 98ರಷ್ಟು ಕರೆನ್ಸಿ ನೋಟುಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಮರಳಿ ಬಂದಿದೆ. ಹಾಗಾದರೆ, ಇದರಿಂದ ಕಪ್ಪು ಹಣ ಸಂಪೂರ್ಣ ನಿರ್ಣಾಮವಾಯಿತೇ ಎಂದು ಅವರು ಪ್ರಶ್ನಿಸಿದ್ದಾರೆ.
ಹೈದರಾಬಾದ್‌ನ ಸಂವಿಧಾನದ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಪ್ಪು ಹಣವನ್ನು ಸಂಪೂರ್ಣವಾಗಿ ತೊಡೆದುಹಾಕುವ ನಿಟ್ಟಿನಲ್ಲಿ ನೋಟು ಅಮಾನ್ಯ ಮಾಡಿರುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. 500 ಮತ್ತು 1000 ಮುಖಬೆಲೆಯ ಶೇಕಡಾ 98ರಷ್ಟು ಹಣ ಬ್ಯಾಂಕಿಗೆ ಹಿಂತಿರುಗಿದೆ. ಅರ್ಥ ವ್ಯವಸ್ಥೆಯಲ್ಲಿ ಈ ಮೌಲ್ಯದ ಹಣ ಶೇಕಡಾ 86ರಷ್ಟಿತ್ತು. ಹಾಗಾದರೆ, ಇದೊಂದು ಯಶಸ್ವಿ ನಡೆ ಎಂಬುದನ್ನು ಕೇಂದ್ರ ಸರ್ಕಾರ ಒಪ್ಪಿಕೊಳ್ಳುತ್ತದೆಯೇ..? ಎಂದು ಪ್ರಶ್ನಿಸಿದರು. ಕೇಂದ್ರ ಸರ್ಕಾರ ತನ್ನ ಗುರಿಯನ್ನು ತಲುಪಿಲ್ಲ ಎಂದು ಹೇಳಬೇಕಾಗಿಲ್ಲ ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದರು.
ಕಪ್ಪುಹಣ ವೈಟ್ ಮಾಡಲು ಮಾರ್ಗವಾಯಿತು..!
ನನಗನ್ನಿಸುತ್ತದೆ, ಈ ನೋಟು ಅಮಾನ್ಯ ಪ್ರಕ್ರಿಯೆ ಮೂಲಕ ಕೆಲವರು ಕಪ್ಪು ಹಣವನ್ನು ವೈಟ್ ಮಾಡಿಕೊಂಡಿದ್ದಾರೆ. ಕಪ್ಪು ಕುಳಗಳಿಗೆ ಇದೊಂದು ಉತ್ತಮ ರಹದಾರಿ ಆಗಿತ್ತು. ಲೆಕ್ಕವಿಲ್ಲದಷ್ಟು ನಗದು ಹಣವನ್ನು ವ್ಯವಸ್ಥೆಯೊಳಗೆ ತುರುಕಲು ಇದು ದಾರಿ ಮಾಡಿದಂತಿತ್ತು ಎಂದು ಅವರು ಅಭಿಪ್ರಾಯಪಟ್ಟರು.
ಆ ಕುರಿತು ಆದಾಯ ತೆರಿಗೆ ಇಲಾಖೆಯವರು ಕೈಗೊಂಡ ಕ್ರಮಗಳು ಎಲ್ಲಿ ಹೋಯಿತು. ಅದರ ಬಗ್ಗೆ ನಮಗೆ ಏನೂ ಗೊತ್ತೇ ಇಲ್ಲ. ಇಂತಹ ಪ್ರಕ್ರಿಯೆಯಲ್ಲಿ ಅತ್ಯಂತ ನೋವು, ಸಂಕಟ ಮತ್ತು ಕಷ್ಟ ಅನುಭವಿಸಿದ್ದು ಸಾಮಾನ್ಯ ಜನತೆ ಎಂಬುದನ್ನು ಮರೆಯುವಂತಿಲ್ಲ. ಉತ್ತಮ ಉದ್ದೇಶ ಹೊಂದಿದ್ದರೂ, ಅದನ್ನು ಜಾರಿ ಮಾಡಿದ ರೀತಿ ಮಾತ್ರ ಸರಿ ಇರಲಿಲ್ಲ ಎಂದು ನ್ಯಾ. ನಾಗರತ್ನ ಅವರು ಅಸಮಾಧಾನ ಹೊರಹಾಕಿದರು.
ಸರ್ಕಾರದ ಮಟ್ಟದಲ್ಲಿ ಅದನ್ನು ಸರಿಯಾಗಿ ಜಾರಿ ಮಾಡಿರಲಿಲ್ಲ. ಅದು ಎಷ್ಟೊಂದು ಎಡವಟ್ಟಿನಿಂದ ಕೂಡಿತ್ತು ಎಂದರೆ ಕೆಲವರು ಹೇಳುತ್ತಾರೆ, ಈ ಕುರಿತ ನಿರ್ಧಾರ ಆಯ್ದ ಸಚಿವರನ್ನು ಬಿಟ್ಟು ಸ್ವತಃ ಹಣಕಾಸು ಸಚಿವರಿಗೂ ತಿಳಿದಿರಲಿಲ್ಲವಂತೆ ಎಂದು ನಾಗರತ್ನ ಬೆಚ್ಚಿ ಬೀಳಿಸುವ ಸತ್ಯವನ್ನು ಹೊರಗೆಡಹಿದರು.