ಕರ್ತವ್ಯ ಮೆರೆದ ಉಡುಪಿ ನ್ಯಾಯಾಧೀಶೆ ಶರ್ಮಿಳಾ ಎಸ್.: ಮಹಿಳೆ, ಮಕ್ಕಳಿಬ್ಬರ ರಕ್ಷಣೆ
ಕರ್ತವ್ಯ ಮೆರೆದ ಉಡುಪಿ ನ್ಯಾಯಾಧೀಶೆ ಶರ್ಮಿಳಾ ಎಸ್.: ಮಹಿಳೆ, ಮಕ್ಕಳಿಬ್ಬರ ರಕ್ಷಣೆ
ಮಹಿಳೆಯರ ಹಾಗೂ ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವುದಷ್ಟೇ ತಮ್ಮ ಕೆಲಸ ಅಲ್ಲ. ಆ ಹಕ್ಕುಗಳ ಮೂಲಕ ರಕ್ಷಣೆ ನೀಡುವುದು ಕೂಡ ತಮ್ಮ ಪರಮ ಕರ್ತವ್ಯ ಎಂಬುದನ್ನು ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಶರ್ಮಿಳಾ ಎಸ್ ನಿರೂಪಿಸಿದ್ದಾರೆ.
ಹೊರ ರಾಜ್ಯದ ಮಹಿಳೆಯೊಬ್ಬರು ತನ್ನ ಇಬ್ಬರು ಪುಟಾಣಿ ಮಕ್ಕಳೊಂದಿಗೆ ಉಡುಪಿ ನ್ಯಾಯಾಲಯದ ಎದುರು ಮಟಮಟ ಮಧ್ಯಾಹ್ನದ ಸುಡುಬಿಸಿಲಿನಲ್ಲಿ ರಸ್ತೆಯಲ್ಲಿ ಅಡ್ಡಾಡುತ್ತಿದ್ದರು. ಅದೇನೋ ವಸ್ತು ಮಾರಾಟ ಮಾಡುತ್ತಿರುವುದನ್ನು ಕಂಡ ನ್ಯಾಯಾಧೀಶೆ ಶರ್ಮಿಳಾ ಎಸ್ ಅವರನ್ನು ರಕ್ಷಿಸುವ ಸ್ವತಃ ಕಾನೂನು ಜಾಗೃತಿ ಮೂಡಿಸಿದ್ದಲ್ಲದೆ ಈ ಮೂಲಕ ಜನರ ಗಮನ ತಿಳಿದಿದ್ದಾರೆ.
ಉಡುಪಿ ನ್ಯಾಯಾಲಯದ ಮುಂಭಾಗದ ರಸ್ತೆಯಲ್ಲಿ ಹೊರರಾಜ್ಯದ ಮಹಿಳೆ ಒಬ್ಬರು ತನ್ನ ಇಬ್ಬರು ಪುಟಾಣಿ ಮಕ್ಕಳ ಜೊತೆ ಸುಂದರ ಕಲಾ ಕೃತಿ ಇರುವ ಸಣ್ಣ ಪುಸ್ತಕ ಮಾರಾಟ ಮಾಡಿಸುತ್ತಿದ್ದರು. ಆಕೆ ಮರದ ನೆರಳಿನಲ್ಲಿ ಕೂತು ಮಕ್ಕಳ ಬಳಿ ಪುಸ್ತಕ ಮಾರಾಟ ಮಾಡುತ್ತಿದ್ದರು.
ಕೋರ್ಟ್ ಕಚೇರಿಗೆ ತೆರಳುತ್ತಿದ್ದ ನ್ಯಾಯಾಧೀಶೆ ಶರ್ಮಿಳಾ ಇದನ್ನು ನೋಡಿ ಕೂಡಲೇ ಮಕ್ಕಳು ಮಹಿಳೆ ಇದ್ದ ಸ್ಥಳಕ್ಕೆ ಆಗಮಿಸಿದರು. ಮೊಬೈಲ್ ಮೂಲಕ ಮಹಿಳಾ ಠಾಣೆ ಪೊಲೀಸರಿಗೆ ಕರೆ ಮಾಡುತ್ತಿದ್ದಂತೆ ಮಹಿಳಾ ಪೊಲೀಸರೂ ಸ್ಥಳಕ್ಕೆ ಆಗಮಿಸಿದರು.
ನ್ಯಾಯಾಧೀಶೆ ಶರ್ಮಿಳಾ ಮಹಿಳೆಯ ಬಳಿ ತಮ್ಮ ಕುಟುಂಬದ ಬಗ್ಗೆ ವಿಚಾರಿಸಿದರು. ಆಕೆ ಕಣ್ಣೀರುಡುತ್ತಾ ಮನೆಯವರು ಹೊಟ್ಟೆಗೆ ತಿನ್ನಲು ಸರಿಯಾಗಿ ಆಹಾರ ಕೊಡುತ್ತಿಲ್ಲ, ತಿನ್ನಲು ದುಡ್ಡಿಲ್ಲ ಹೀಗಾಗಿ ಈ ಸಣ್ಣ ಪುಸ್ತಕ ಮಾರಾಟ ಮಾಡುತ್ತಿದ್ದೇನೆ ಎಂದು ಗದ್ಗದಿತರಾಗಿ ಉತ್ತರಿಸಿದರು.
ಇದೇ ವೇಳೆ ಮಕ್ಕಳ ರಕ್ಷಣಾ ಘಟಕ ಹಾಗೂ ಕಾರ್ಮಿಕ ಇಲಾಖೆಗೂ ಮಾಹಿತಿ ನೀಡಿದ್ದರಿಂದ ಅವರೂ ಸ್ಥಳಕ್ಕೆ ಆಗಮಿಸಿದರು. ಜಡ್ಜ್ ಸೂಚನೆಯಂತೆ ಕಾನೂನಾತ್ಮಕವಾಗಿ ತಾಯಿ ಮಕ್ಕಳನ್ನು ರಕ್ಷಿಸುವ ಪ್ರಕ್ರಿಯೆ ನಡೆಸಿದರು.
ಸ್ಥಳಕ್ಕೆ ಆಗಮಿಸಿದ ಮಹಿಳಾ ಠಾಣೆಯ ಸಿಬ್ಬಂದಿ, ಸಂತ್ರಸ್ತರನ್ನು ಸ್ಟೇಷನ್ ಗೆ ಬರಲು ಸೂಚಿಸಿದರು. ಅದಕ್ಕೆ ಮಹಿಳೆ ನಿರಾಕರಿಸಿದರು. ಕೊನೆಗೆ ಹರಸಾಹಸ ಪಟ್ಟು ಮಹಿಳಾ ಸಿಬ್ಬಂದಿ ಆಟೋರಿಕ್ಷದಲ್ಲಿ ಮಹಿಳೆ ಮತ್ತು ಮಕ್ಕಳನ್ನು ಠಾಣೆಗೆ ಕರೆದುಕೊಂಡು ಹೋದರು.
ಪೊಲೀಸರು ಬರುವವರೆಗೂ ನ್ಯಾಯಾಧೀಶ ಶರ್ಮಿಳಾ ಅವರೇ ಸ್ಥಳದಲ್ಲಿದ್ದು ಮಕ್ಕಳ ಆರೈಕೆ ಮಾಡಿ ಬಳಿಕ ಅವರು ನ್ಯಾಯಾಲಯಕ್ಕೆ ತೆರಳಿದರು. ತಾಯಿ ಹಾಗೂ ಇಬ್ಬರು ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಯಿತು. ನಂತರ ಸಖಿ ಕೇಂದ್ರಕ್ಕೆ ಅವರನ್ನು ಸ್ಥಳಾಂತರ ಮಾಡಲಾಯಿತು. ಇದೀಗ ಈ ಮೂವರನ್ನು ಆರೈಕೆ ಮಾಡಲಾಗುತ್ತಿದೆ. ನ್ಯಾಯಾಧೀಶರ ಮಾನವೀಯ ಕಳಕಳಿಗೆ ಇದೀಗ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.