ಸರ್ಕಾರಕ್ಕೆ ಆರ್ಥಿಕ ನಷ್ಟ, ಹಣ ದುರುಪಯೋಗ, ಕರ್ತವ್ಯ ಲೋಪ: ನಿವೃತ್ತ ಸಾರಿಗೆ ಆಯುಕ್ತರ ವಿರುದ್ಧ FIR: ಸರ್ಕಾರ ನಿರ್ದೇಶನ
ಸರ್ಕಾರಕ್ಕೆ ಆರ್ಥಿಕ ನಷ್ಟ, ಹಣ ದುರುಪಯೋಗ, ಕರ್ತವ್ಯ ಲೋಪ: ನಿವೃತ್ತ ಸಾರಿಗೆ ಆಯುಕ್ತರ ವಿರುದ್ಧ FIR: ಸರ್ಕಾರ ನಿರ್ದೇಶನ
ಸ್ಮಾರ್ಟ್ ಕಾರ್ಡ್ ಹಾಗೂ ಇತರ ಕಾರ್ಡ್‌ಗಳನ್ನು ಪೂರೈಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಆಗಿರುವ ಆರ್ಥಿಕ ನಷ್ಟ, ಹಣದ ದುರುಪಯೋಗ ಮತ್ತು ಕರ್ತವ್ಯ ಲೋಪದ ಆರೋಪಗಳ ಬಗ್ಗೆ ಇಲಾಖೆಯ ಹಿಂದಿನ ಆಯುಕ್ತ ಹಾಗೂ ನಿವೃತ್ತ IPS ಅಧಿಕಾರಿ ಶಿವಕುಮಾರ್ ಸಹಿತ ಇನ್ನಿತರರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಸಾರಿಗೆ ಇಲಾಖೆಯ ಆಯುಕ್ತರಿಗೆ ಸರ್ಕಾರ ನಿರ್ದೇಶನ ನೀಡಿದೆ.
ಈ ವಿಷಯವನ್ನು "ದಿ ಫೈಲ್, ಆನ್ ದಿ ರೆಕಾರ್ಡ್" ತನ್ನ ತನಿಖಾ ವರದಿಯಲ್ಲಿ ಬಹಿರಂಗ ಪಡಿಸಿದೆ.
ಸಾರಿಗೆ ಇಲಾಖೆಯ ಹಿಂದಿನ ಆಯುಕ್ತ, ಐಪಿಎಸ್ ಅಧಿಕಾರಿ ಶಿವಕುಮಾರ್ ವಿರುದ್ಧ ಪ್ರಕರಣವನ್ನು ಹೆಚ್ಚಿನ ತನಿಖೆಗೆ ವಹಿಸಲು ರಾಜ್ಯ ಸರ್ಕಾರ ಮುಂದಾಗಿತ್ತು. ಆದರೆ, ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿಲ್ಲ ಎಂಬ ಕಾರಣಕ್ಕೆ ಗೃಹ ಇಲಾಖೆಯು ಕಡತವನ್ನು ಸಾರಿಗೆ ಇಲಾಖೆಗೆ ಮರಳಿ ನೀಡಿತ್ತು. ಇದೀಗ ಸಾರಿಗೆ ಇಲಾಖೆಯ ಕಾರ್ಯದರ್ಶಿ ಎಫ್‌ಐಆರ್ ದಾಖಲಿಸಲು ನಿರ್ದೇಶನ ನೀಡಿದ್ದಾರೆ.
ಎಫ್‌ಐಆರ್ ದಾಖಲಿಸಲು ಸಚಿವ ರಾಮಲಿಂಗಾ ರೆಡ್ಡಿ ಅವರೂ ಸಹ ಅನುಮೋದನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ರೋಸ್‌ಮೆರ್ಟಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಾರಿಗೆ ಇಲಾಖೆಗೆ ಸ್ಮಾರ್ಟ್ ಕಾರ್ಡ್ ಹಾಗೂ ಇತರ ಕಾರ್ಡ್‌ಗಳನ್ನು ಪೂರೈಸುತ್ತಿತ್ತು. ಈ ಕಂಪೆನಿಗೆ ಐಪಿಎಸ್ ಅಧಿಕಾರಿ ಶಿವಕುಮಾರ್ ಪರೋಕ್ಷವಾಗಿ ಸಹಾಯ ಮಾಡುತ್ತಿದ್ದಾರೆ ಎಂಬ ದೂರುಗಳು ಬಂದಿತ್ತು.
ಈ ಪ್ರಕರಣದ ಬಗ್ಗೆ ಹಿಂದಿನ ಬಿಜೆಪಿ ಸರ್ಕಾರಕ್ಕೆ ಮಾಹಿತಿ ಇತ್ತು. ಆದರೂ, ಸರ್ಕಾರ ಈ ಬಗ್ಗೆ ತನಿಖೆ ನಡೆಸುವ, ಕ್ರಮ ಕೈಗೊಳ್ಳುವ ಯಾವುದೇ ಆಸಕ್ತಿ ತೋರಿಸಲಿಲ್ಲ ಎನ್ನಲಾಗಿದೆ.
ಕೃಪೆ: ಜಿ. ಮಹಾಂತೇಶ್, ದಿ ಫೈಲ್, ಆನ್ ದಿ ರೆಕಾರ್ಡ್