ರಾಜ್ಯ ಸರ್ಕಾರಿ ನೌಕರರ ಅಧ್ಯಕ್ಷ ಷಡಕ್ಷರಿ ಎತ್ತಂಗಡಿ: ವರ್ಗಾವಣೆಗೆ ನೀಡಿದ ಕಾರಣ ಇದು!
ರಾಜ್ಯ ಸರ್ಕಾರಿ ನೌಕರರ ಅಧ್ಯಕ್ಷ ಷಡಕ್ಷರಿ ಎತ್ತಂಗಡಿ: ವರ್ಗಾವಣೆಗೆ ನೀಡಿದ ಕಾರಣ ಇದು!
ರಾಜ್ಯ ಸರ್ಕಾರಿ ನೌಕರರ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಅವರನ್ನು ಎತ್ತಂಗಡಿ ಮಾಡಲಾಗಿದೆ. ಶಿವಮೊಗ್ಗದಿಂದ ಕೋಲಾರಕ್ಕೆ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಈ ಬಗ್ಗೆ ಆದೇಶ ಹೊರಡಿಸಲಾಗಿದೆ.
ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಶಿವಮೊಗ್ಗದ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಲೆಕ್ಕಾಧೀಕ್ಷಕರಾಗಿದ್ದ ಷಡಕ್ಷರಿ ಅವರನ್ನು ಕೋಲಾರ ಜಿಲ್ಲೆಯಲ್ಲಿ ಖಾಲಿ ಇದ್ದ ಸಮಾಜ ಕಲ್ಯಾಣ ಇಲಾಖೆಯ ಲೆಕ್ಕಾಧೀಕ್ಷಕ ಹುದ್ದೆಗೆ ವರ್ಗಾವಣೆಗೊಳಿಸಿ ಆರ್ಥಿಕ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಷಡಕ್ಷರಿ ಅವರು ತಮ್ಮ ಕರ್ತವ್ಯದ ಸ್ಥಳವಾದ ಶಿವಮೊಗ್ಗದಲ್ಲಿ ಇರದೆ ಹೆಚ್ಚಿನ ಸಂದರ್ಭದಲ್ಲಿ ರಾಜಧಾನಿ ಬೆಂಗಳೂರಿನಲ್ಲೇ ಇರುತ್ತಿದ್ದರು. ಕಚೇರಿಯಲ್ಲಿ ಬಹುತೇಕ ಹೆಚ್ಚಿನ ವೇಳೆ ಅಲಭ್ಯರಾಗಿಯೇ ಇರುತ್ತಿದ್ದರು. ಈ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದಿತ್ತು ಎನ್ನಲಾಗಿದೆ.
ಇದಕ್ಕಿಂತ ಹೆಚ್ಚಾಗಿ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಆಪ್ತರಾಗಿದ್ದರು. ಈಗಲೂ ನಿಕಟ ಸಂಪರ್ಕದಲ್ಲಿ ಇದ್ದರು ಎನ್ನಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಪ್ರಯತ್ನ ನಡೆಸಿದ್ದರು.
ಕಚೇರಿಯಲ್ಲಿ ಅವರ ಅಲಭ್ಯತೆ ಬಗ್ಗೆ ಸಚಿವ ಮಧು ಬಂಗಾರಪ್ಪ ಅವರಿಗೂ ಅಸಮಾಧಾನವಿತ್ತು ಎಂದು ಹೇಳಲಾಗಿದೆ.