2000 ರೂ. ನೋಟು ಇದೆಯಾ..? ನಗದೀಕರಿಸಲು ಲಾಸ್ಟ್ ಚಾನ್ಸ್!
2000 ರೂ. ನೋಟು ಇದೆಯಾ..? ನಗದೀಕರಿಸಲು ಲಾಸ್ಟ್ ಚಾನ್ಸ್!
ದೇಶದಲ್ಲಿ ಈಗ ರೂ. 2000/- ಮುಖಬೆಲೆಯ ನೋಟು ಈಗ ಚಲಾವಣೆಯಲ್ಲಿ ಇಲ್ಲ. ನಿಮ್ಮಲ್ಲಿ ಇಂತಹ ನೋಟುಗಳು ಆಕಸ್ಮಾತ್ ಆಗಿ ಉಳಿದುಬಿಟ್ಟಿದ್ದರೆ ಅದನ್ನು ನಗದೀಕರಿಸಲು ಒಂದು ಕೊನೆಯ ಅವಕಾಶ ಇಲ್ಲಿದೆ.
ನಿಗದಿತ ಗುಡುವಿನೊಳಗೆ ರೂ. 2000/- ಮುಖಬೆಲೆಯ ನೋಟನ್ನು ಬ್ಯಾಂಕ್‌ಗಳಿಗೆ ಮರಳಿಸದ ನಾಗರಿಕರಿಗೆ ಭಾರತೀಯ ರಿಸರ್ವ್ ಬ್ಯಾಂಕ್ - RBI ಅಂತಿಮ ಅವಕಾಶವನ್ನು ನೀಡಿದೆ.
ಇಂತಹ ನೋಟುಗಳನ್ನು ಹೊಂದಿದವರು ವಿಮಾ ಸೌಲಭ್ಯ ಹೊಂದಿದ ಅಂಚೆ ಲಕೋಟೆ (Insured Post) ಮೂಲಕ ಆರ್‌ಬಿಐನ ಪ್ರಾದೇಶಿಕ ಕಚೇರಿಗೆ ಕಳುಹಿಸಿಕೊಡಬೇಕು. ಅದನ್ನು ಪರಿಗಣಿಸಿ ನೋಟುಗಳ ಮೌಲ್ಯದಷ್ಟು ಮೊತ್ತವನ್ನು ಸಂಬಂಧಪಟ್ಟ ಗ್ರಾಹಕರ ಬ್ಯಾಂಕ್ ಖಾತೆಗೆ ಜಮೆ ಮಾಡುವುದಾಗಿ ಆರ್‌ಬಿಐ ತಿಳಿಸಿದೆ.
ಆದರೆ, ನೋಟುಗಳನ್ನು ಬದಲಿಸಿಕೊಳ್ಳಲು ಈಗ ಪ್ರಾದೇಶಿಕ ಕಚೇರಿಗೆ ಮಾತ್ರ ಅವಕಾಶ ಇದೆ. ಇಂತಹ ಪ್ರಾದೇಶಿಕ ಕಚೇರಿಯಿಂದ ದೂರದಲ್ಲಿ ಇರುವ ಗ್ರಾಹಕರು ನೋಟು ವಾಪಸೀಕರಣದ ಸಮಸ್ಯೆಯಿಂದ ಕಂಗಾಲಾಗಿದ್ದಾರೆ. ಕೆಲವೊಮ್ಮೆ ನಿರ್ದಿಷ್ಟ ಶಾಖೆಗಳಲ್ಲಿ ಕ್ಯೂನಲ್ಲಿ ನಿಂತು ಸಮಸ್ಯೆ ಅನುಭವಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಅಂಚೆ ಮೂಲಕ ನೋಟು ಬದಲಿಸುವ ಸೌಲಭ್ಯವನ್ನು ಆರ್‌ಬಿಐ ಆರಂಭಿಸಿದ್ದು, ಇದು 2000 ರೂ. ನೋಟು ಇರುವ ಗ್ರಾಹಕರಿಗೆ ಕೊಂಚ ರಿಲೀಫ್ ನೀಡಿದೆ.
ವಿಮಾ ಸೌಲಭ್ಯ ಇರುವ ಕಾರಣ ಕೆಲವೊಮ್ಮೆ ಈ ಅಂಚೆ ಲಕೋಟೆ ಕಳೆದುಹೋದರೂ ಅದರಲ್ಲಿ ಇದ್ದ ಮೊತ್ತದ ಹಣ ವಿಮಾ ಪರಿಹಾರವಾಗಿ ಗ್ರಾಹಕರ ಜೇಬು ಸೇರಲಿದೆ. ಇದರಿಂದ ವಿಮಾ ಲಕೋಟೆ ಸುರಕ್ಷಿತವಾಗಿದ್ದು, ಯಾವುದೇ ಆತಂಕವಿಲ್ಲದೆ ಜನ ನಿಷೇಧಿತ ಹಣವನ್ನು ಲಕೋಟೆಯಲ್ಲಿಟ್ಟು ಆರ್‌ಬಿಐಗೆ ಕಳುಹಿಸಬಹುದಾಗಿದೆ ಎಂದು ಅದರ ಪ್ರಕಟಣೆ ತಿಳಿಸಿದೆ.