ಉಪ ನೋಂದಣಿ ಕಚೇರಿಯಲ್ಲಿ ರಿಜಿಸ್ಟ್ರೇಷನ್ ಮಾಡಿದವರ ಬ್ಯಾಂಕ್ ಖಾತೆ ಹ್ಯಾಕ್- ಹಣ ವರ್ಗಾವಣೆ ಮಾಡಿದ ಆರೋಪಿಗಳು ಅರೆಸ್ಟ್
ಉಪ ನೋಂದಣಿ ಕಚೇರಿಯಲ್ಲಿ ರಿಜಿಸ್ಟ್ರೇಷನ್ ಮಾಡಿದವರ ಬ್ಯಾಂಕ್ ಖಾತೆ ಹ್ಯಾಕ್- ಹಣ ವರ್ಗಾವಣೆ ಮಾಡಿದ ಮೂವರು ಆರೋಪಿಗಳು ಅರೆಸ್ಟ್
ಮಂಗಳೂರಿನ ಉಪ ನೋಂದಣಿ ಕಚೇರಿಯಲ್ಲಿ ರಿಜಿಸ್ಟ್ರೇಷನ್ ಮಾಡಿದವರ ಬೆರಳಚ್ಚು ಮತ್ತು ಇತರ ಮಾಹಿತಿ ಪಡೆದು ಅವರ ಬ್ಯಾಂಕ್ ಖಾತೆ ಹ್ಯಾಕ್ ಮಾಡಿ ತಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿದ ಮೂವರು ಖತರ್ನಾಕ್ ಆರೋಪಿಗಳನ್ನು ಮಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತರನ್ನು ಬಿಹಾರ ಮೂಲದ ದೀಪಕ್ ಕುಮಾರ್ ಹೆಂಬ್ರಮ್ (33 ವರ್ಷ), ವಿವೇಕ್ ಕುಮಾರ್ ಬಿಶ್ವಾಸ್ (24 ವರ್ಷ) ಮತ್ತು ಮದನ್ ಕುಮಾರ್ (23 ವರ್ಷ) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳು ದೇಶದ ವಿವಿಧ ರಾಜ್ಯಗಳಲ್ಲಿ ಆಧಾರ್ ಎನೇಬಲ್ಡ್ ಪೇಮೆಂಟ್ ವ್ಯವಸ್ಥೆಯಡಿ ನಗರದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿ ನೋಂದಣಿ ಮಾಡಿದ ಹಲವರ ಬ್ಯಾಂಕ್ ಖಾತೆಗಳಿಂದ ಹಣ ವರ್ಗಾವಣೆ ಮಾಡಿದ್ದರು ಎನ್ನಲಾಗಿದೆ. ಮಂಗಳೂರಿನ ಸರಣಿ ಪ್ರಕರಣಕ್ಕೆ ಸಂಬಂಧಿಸಿ ಈ ಮೂವರು ಕುಖ್ಯಾತ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಂಧಿತ ಆರೋಪಿಗಳ ಬಳಿ ಇದ್ದ ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದುಕೊಂಡು ತಾಂತ್ರಿಕ ಪರಿಶೀಲನೆಗೆ ವಿಶೇಷ ತನಿಖೆಗೆ ಒಳಪಡಿಸಲಾಗಿದೆ. 10 ವಿವಿಧ ಬ್ಯಾಂಕ್ ಖಾತೆಗಳಲ್ಲಿ ಜಮೆ ಮಾಡಿದ್ದ 3,60,242 ರೂ.ಗಳ ವಹಿವಾಟು ಸ್ಥಗಿತಗೊಳಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ನಗರದ ಹಲವು ಮಂದಿ ಆಸ್ತಿ ನೋಂದಣಿಗೆ ಸಂಬಂಧಿಸಿದ "ಕಾವೇರಿ 2.0" ವೆಬ್‌ಸೈಟ್‌ನಲ್ಲಿ ತಮ್ಮ ವಿವರಗಳನ್ನು ಸಲ್ಲಿಸಿದ್ದರು. ಈ ವೆಬ್‌ಸೈಟ್‌ನ್ನು ಹ್ಯಾಕ್ ಮಾಡಿದ್ದ ಈ ಖದೀಮರು ದಾಖಲಾತಿಗಳನ್ನು ಅಕ್ರಮವಾಗಿ ಪಡೆದು ಅದರಲ್ಲಿರುವ ಆಧಾರ್ ಸಂಖ್ಯೆ ಮತ್ತು ಹೆಬ್ಬೆರಳ ಗುರುತನ್ನು ಸಂಗ್ರಹಿಸಿ Scanner ಮೂಲಕ ಬೆರಳಚ್ಚು ಮುದ್ರೆ(Thumb)ಯನ್ನು Scan ಮಾಡಿ ಅವರ ಬ್ಯಾಂಕ್ ಖಾತೆಗಳಿಂದ ಹಣವನ್ನು ತಮ್ಮ ಖಾತೆಗಳಿಗೆ ಅಕ್ರಮವಾಗಿ ಟ್ರಾನ್‌ಫರ್ ಮಾಡಿಸಿಕೊಳ್ಳುತ್ತಿದ್ದರು.
ಒಂದೆರಡು ದಿನಗಳ ಅವಧಿಯಲ್ಲಿ ಮಂಗಳೂರು ನಗರದ ವಿವಿಧ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿ ಹಾಗೂ ಇತರ ನೋಂದಣಿ ಮಾಡಿಸಿದ ಹಲವರ ಖಾತೆಯಿಂದ ಹಣ ಮಂಗಮಾಯವಾಗಿತ್ತು. ಈ ಬಗ್ಗೆ ವ್ಯಾಪಕ ದೂರುಗಳು ಕೇಳಿಬಂದಿದ್ದವು.
ಮಂಗಳೂರಿನ ಆರ್ಥಿಕ ಅಪರಾಧಗಳ ಪೊಲೀಸ್ ಠಾಣೆಗೆ ಈ ವಿಚಾರದಲ್ಲಿ ಹಲವು ದೂರುಗಳು ಬಂದಿದ್ದು, ಹೀಗೆ ದಾಖಲಾಗಿದ್ದ 10 ಲಿಖಿತ ದೂರುಗಳನ್ನು ತನಿಖೆಗೊಳಪಡಿಸಲಾಗಿತ್ತು ಎಂದು ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದರು.
ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ 1000ಕ್ಕೂ ಹೆಚ್ಚು ನೋಂದಣಿ ಪತ್ರಗಳ ಪಿಡಿಎಫ್ ಮತ್ತು ಆಂಧ್ರ ಪ್ರದೇಶ ಹಾಗೂ ಇತರ ಕೆಲವು ರಾಜ್ಯಗಳ 300ಕ್ಕೂ ಅಧಿಕ ಪಿಡಿಎಫ್ ಪ್ರತಿಗಳನ್ನು ಆರೋಪಿಗಳು ಸಂಗ್ರಹಿಸಿಟ್ಟಿರುವುದು ತನಿಖೆಯ ಸಂದರ್ಭ ಗೊತ್ತಾಗಿದೆ. ಹೆಚ್ಚುವರಿ ತನಿಖೆಗಾಗಿ ಅರೋಪಿಗಳನ್ನು ಬಿಹಾರಕ್ಕೆ ಕರೆದೊಯ್ದು ಸ್ಥಳ ಪರಿಶೀಲನೆ ನಡೆಸಿ ದಾಖಲಿಸಿ ಸಂಗ್ರಹಿಸಲಾಗುವುದು ಎಂದು ತಿಳಿಸಿದ್ದಾರೆ.