UDUPI : ಪೊಲೀಸ್ ಅಧಿಕಾರಿಯಂತೆ ನಟಿಸಿ ಹಣ ವಸೂಲಿ ; ಇಬ್ಬರ ಬಂಧನ
Monday, May 29, 2023
ಪೊಲೀಸ್ ಅಧಿಕಾರಿಗಳಂತೆ ನಟಿಸಿ ಹಣ ವಸೂಲಿ ಮಾಡುತ್ತಿದ್ದ ಇಬ್ಬರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಶಿರ್ವ ನಿವಾಸಿ ಮಂಜುನಾಥ್ ಮತ್ತು ಸ್ನೇಹಿತರೊಂದಿಗೆ ಮಣಿಪಾಲದ ಅರ್ಬಿ ಫಾಲ್ಸ್‌ನಲ್ಲಿ ಬಳಿ ಇದ್ದಾಗ, ಹಾವೇರಿಯ ಹನುಮಂತಪ್ಪ ಮತ್ತು ಮುರುಡೇಶ್ವರದ ಮಹದೇವಪ್ಪ ಎನ್ನುವವರು ಪೊಲೀಸ್ ಅಂತ ಹೇಳಿಕೊಂಡು ಬಂದಿದ್ದಾರೆ.
ಇಬ್ಬರು ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಎಂದು ಹೇಳಿ, ಮಂಜುನಾಥ್ ಅವರನ್ನು ಪ್ರಶ್ನಿಸಿ, ಮಣಿಪಾಲ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅವರನ್ನು ಸಂಪರ್ಕಿಸುವುದಾಗಿ ಹೇಳಿದ್ದಾರೆ. ಬಳಿಕ ಆರೋಪಿಗಳಿಬ್ಬರು ಮತ್ತೊಬ್ಬ ಸಹಚರ ಲಕ್ಷ್ಮಣ ಕುಪ್ಪಗೊಂಡ ಎಂಬಾತನಿಗೆ ದೂರವಾಣಿ ಕರೆ ಮಾಡಿ ಸ್ಪೀಕರ್ ಫೋನ್ ಹಾಕಿದ್ದರು. ಲಕ್ಷ್ಮಣ್ ಮಣಿಪಾಲ ಪೊಲೀಸ್ ಠಾಣೆಯ ಎಸ್‌ಐ ಎಂದು ಯಾಮಾರಿಸಿ, 5 ಸಾವಿರ ರೂಪಾಯಿ ನೀಡಬೇಕು, ಇಲ್ಲವಾದಲ್ಲಿ ಪ್ರಕರಣ ದಾಖಲಿಸುವುದಾಗಿ ಮಂಜುನಾಥಗೆ ಭಯ ಬೀಳಿಸಿದ್ದಾರೆ. ಭಯದಿಂದ ಮಂಜುನಾಥ್ ಗೂಗಲ್ ಪೇ ಮೂಲಕ 5 ಸಾವಿರ ರೂ. ಹಾಕಿದ್ದಾರೆ. ಇತ್ತ ಅನುಮಾನಗೊಂಡ ಮಂಜುನಾಥ್ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಣಿಪಾಲ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ಸುಲಿಗೆ ದಂಧೆಯಲ್ಲಿ ತೊಡಗಿದ್ದ ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ.