
ಎದೆಹಾಲುಣಿಸುವಾಗ ಉಸಿರುಗಟ್ಟಿ ಮಗುಸಾವು : ಮನನೊಂದು ತಾಯಿ ಮಗ ಆತ್ಮಹತ್ಯೆಗೆ ಶರಣು
ಇಡುಕ್ಕಿ : ಜನ್ಮ ಕೊಟ್ಟ ತಾಯಿಗೆ ತನ್ನ ಕಂದನೇ ಜಗತ್ತು. ಆಕೆಯ ಎದೆಯ ಹಾಲು ಅಮೃತಕ್ಕೂ ಮಿಗಿಲು. ಸದ್ಯ ಇಲ್ಲೊಂದು ಘಟನೆಯಲ್ಲಿ ತಾಯಿಯೇ ತನ್ನ ಮಗುವಿನ ಸಾವಿಗೆ ಕಾರಣಳಾದೆ ಎಂದು ಮನನೊಂದು ತನ್ನ ಹಿರಿಯ ಮಗನೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಇಡುಕ್ಕಿ ಜಿಲ್ಲೆಯ ಉಪ್ಪುಥರಾ ಪಂಚಾಯಿತಿಯ ಕೈಥಪಥಲ ಎಂಬಲ್ಲಿ ನಡೆದಿದೆ.
ಹೌದು ಲಿಜಿ (38) ವರ್ಷದ ಮಹಿಳೆ ತನ್ನ ನವಜಾತ ಶಿಶುಗೆ ಎದೆಹಾಲುಣಿಸುವಾಗ ಮಗು ಉಸಿರುಗಟ್ಟಿ ಸಾವನ್ನಪ್ಪಿದೆ. ಈ ಘಟನೆಯಿಂದ ತೀವ್ರವಾಗಿ ನೊಂದ ಲಿಜಿ ತನ್ನ ಹಿರಿಯ ಮಗ ಲಿನ್ ಟಾಮ್ (7) ಜತೆ ಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದಾಳೆ. ಮಾರ್ಚ್ 16 ಬೆಳಗ್ಗೆ 6 ಗಂಟೆಗೆ ಈ ಘಟನೆ ನಡೆದಿದೆ. ಆಕೆಯ ಸಂಬಂಧಿಕರು ಚರ್ಚ್ ಗೆ ಹೋಗಿದ್ದ ಸಂದರ್ಭದಲ್ಲಿ ಈ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ ಲಿಜಿ.
ಸದ್ಯ ಮಗು ಮೃತಪಟ್ಟ ಘಟನೆಯಿಂದ ತಾಯಿ ತುಂಬಾ ಮನನೊಂದಿದ್ದಳು ಎಂದು ಆಕೆಯ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.