ಹೆಣ್ಣು ಮಗು ಎಂದು ಹೆರಿಗೆಯಾದ ತಕ್ಷಣ ಶಿಶು ಕೊಂದ 15ರ ಪೋರಿ
Monday, March 6, 2023
ಮುಂಬೈ : ಯೂಟ್ಯೂಬ್ ವಿಡಿಯೋಗಳನ್ನು ನೋಡಿ 15 ವರ್ಷದ ಬಾಲಕಿಯೊಬ್ಬಳು ಮನೆಯಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ಮಹಾರಾಷ್ಟ್ರದ ನಾಗುರ ನಗರದಲ್ಲಿ ನಡೆದಿದೆ. ಇನ್ನು ಹೆರಿಗೆಯಾದ ಬಳಿಕ ಆ ಬಾಲೆ ಮಗು ಹೆಣ್ಣು ಎಂದು ತಿಳಿದು ಆ ನವಜಾತ ಶಿಶುವನ್ನು ಕೊಂದು ಹಾಕಿದ್ದಾಳೆ.
ಹೌದು ಬಾಲಕಿ ಅಂಬಾಜಾರಿ ಪ್ರದೇಶದ ನಿವಾಸಿ. ಈಕೆಗೆ ಸಾಮಾಜಿಕ ಜಾಲತಾಣ ದಲ್ಲಿ ವ್ಯಕ್ತಿಯೊಬ್ಬ ಪರಿಚಯವಾಗಿದ್ದಾನೆ. ಪರಿಚಯ ಸಲುಗೆಗೆ ತಿರುಗಿ ಆತ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವ್ಯಕ್ತಿಯ ಕಾಮತೃಷೆಗೆ ಬಾಲಕಿ ಗರ್ಭಿಣಿಯಾಗಿದ್ದಾಳೆ. ಆದರೆ ತಾಯಿ ಬಳಿ ಮಾತ್ರ ತನಗೆ ಆರೋಗ್ಯ ಸಮಸ್ಯೆಗಳಿವೆ ಎಂದು ಹೇಳುತ್ತಾ ತಾನು ಗರ್ಭಿಣಿ ಎಂಬ ವಿಚಾರವನ್ನು ಮುಚ್ಚಿಟ್ಟಳು. ಅಲ್ಲದೆ ಗೌಪ್ಯತೆ ಕಾಪಾಡಿಕೊಳ್ಳಲು ಆಕೆ ಯೂಟ್ಯೂಬ್ ಮೊರೆ ಹೋಗಿದ್ದಾಳೆ. ಮಾರ್ಚ್ 2 ರಂದು ಅವಳು ತನ್ನ ಮನೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಮಗು ಹುಟ್ಟಿದ ತಕ್ಷಣವೇ ಆಕೆ ನವಜಾತ ಶಿಶುವನ್ನು ಕತ್ತು ಹಿಸುಕಿ ಸಾಯಿಸಿ ನಂತರ ಶವವನ್ನು ತನ್ನ ಮನೆಯ ಪೆಟ್ಟಿಗೆಯಲ್ಲಿ ಬಚ್ಚಿಟ್ಟಿದ್ದಾಳೆ.
ಇತ್ತ ಕೆಲಸದ ನಿಮಿತ್ತ ಹೊರಗಡೆ ತೆರಳಿದ್ದ ತಾಯಿ ಮನೆಗೆ ಮರಳಿದ ಬಳಿಕ ಮಗಳ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಬಾಲಕಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ನವಜಾತ ಶಿಶುವಿನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು. ಘಟನೆ ಸಂಬಂಧ ಪ್ರಕರಣ ದಾಖಲಿಸಲಾಗಿದೆ.