
ಮನೆಯೊಳಗೆ ಬಂದ ಕಪ್ಪೆಯ ಸಾಂಬಾರ ಮಾಡಿದ ಅಪ್ಪ - ತಿಂದು ಸಾವನ್ನಪ್ಪಿದ ಮಗಳು
Monday, February 13, 2023
ಕಪ್ಪೆಯೊಂದು ಮನೆಯೊಳಗೆ ಬಂತು ಎಂದು ಕೋಪಗೊಂಡ ಅಪ್ಪ ಅದನ್ನು ಕೊಂದು ಕುದಿಸಿ, ಮನೆ ಮಂದಿಗೆಲ್ಲ ಅದರಿಂದ ಸಾಂಬಾರ್ ಮಾಡಿಟ್ಟಿದ್ದಾನೆ. ಅದನ್ನು ತಿಂದ ಆರು ವರ್ಷದ ಬಾಲಕಿ ಸಾವನ್ನಪ್ಪಿದೆ. ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ ಈ ದಾರುಣ ಘಟನೆ ನಡೆದಿದೆ. ಬುಡಕಟ್ಟು ಜನಾಂಗದ ಮನೆ ಯಜಮಾನ ಮನೆಗೆ ಬಂದಿದ್ದ ಕಪ್ಪೆಯನ್ನು ಕೊಂದು ಅಡುಗೆ ಮಾಡಿದ್ದಾನೆ.
ನಂತರ ಅದನ್ನು ಸೇವಿಸಿದ ಆರು ವರ್ಷದ ಸುಮಿತ್ರಾ ಮುಂಡಾ ಸಾವನ್ನಪ್ಪಿದ್ದು, ಇನ್ನೊಂದು 4 ವರ್ಷದ ಮುನ್ನಿ ಎಂಬ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. ಕಿಯೋಂಜಾರ್ ಜಿಲ್ಲೆಯ ಜೋಡಾ ಬ್ಲಾಕ್‌ನಲ್ಲಿ ಈ ಘಟನೆ ನಡೆದಿದೆ. ಈ ಕಪ್ಪೆ ಸಾಂಬಾರ್ ತಿಂದ ತಂದೆ ಮುನ್ನಾ ಮುಂಡಾ ಕೂಡ ಅಸ್ವಸ್ಥರಾಗಿದ್ದಾರೆ. ಈ ಸುದ್ದಿ ತಿಳಿದ ಪೊಲೀಸರು ಕಿಯೋಂಜಾರ್‌ನಿಂದ 70 ಕಿಮೀ ದೂರದಲ್ಲಿರುವ ಬಾಮೆಬರಿ ಪೊಲೀಸ್ ಠಾಣೆ
ವ್ಯಾಪ್ತಿಯ ಗುರ್ದಾ ಎಂಬ ಹಳ್ಳಿಗೆ ಭೇಟಿ ನೀಡಿದರು. ಘಟನೆಯನ್ನು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ವಿವರಿಸಿದ್ದಾರೆ.
ಘಟನೆ ಸಂಬಂಧ ಬಾಮೆಬೇರಿ ಠಾಣೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಬಾಲಕಿಯ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ಬಾಮೆಬೇರಿ ಪೊಲೀಸ್ ಠಾಣೆ ಪ್ರಭಾರಿ ಅಧಿಕಾರಿ ಸ್ವರೂಪ್ ರಂಜನ್ ನಾಯಕ್ ತಿಳಿಸಿದ್ದಾರೆ.