ಹಿಂದೂ ಕಾರ್ಯಕರ್ತರು ಅಣಬೆಗಳಿದ್ದಂತೆ : ವಿವಾದಾತ್ಮಕ ಹೇಳಿಕೆ ನೀಡಿದ ಪುತ್ತೂರು ಶಾಸಕ ಸಂಜೀವ ಮಠಂದೂರು -ಹಿಂದೂ ಸಂಘಟನೆಗಳ ಆಕ್ರೋಶ
Thursday, February 9, 2023
ನಾಡಿನ ಹಿಂದೂ ಕಾರ್ಯಕರ್ತರನ್ನು ಅಣಬೆಗೆ ಹೋಲಿಸುವ ಮೂಲಕ ಪುತ್ತೂರು ಶಾಸಕ ಸಂಜೀವ ಮಠಂದೂರು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.ಈ ವಿವಾದಾತ್ಮಕ ಹೇಳಿಕೆ ನೀಡಿರುವ ಶಾಸಕರ ವಿರುದ್ಧ ಹಿಂದೂ ಸಂಘಟನೆಗಳು ಕಿಡಿಕಿಡಿಕಾರಿವೆ.
ಶಾಸಕ ಸಂಜೀವ ಮಠಂದೂರು ಪುತ್ತೂರಿನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಹಿಂದೂಗಳನ್ನು 'ಅಣಬೆ ಗೆ ಹೋಲಿಸಿ ಮಾತನಾಡಿದ್ದಾರೆ. ಈಗ 'ಅಣಬೆ' ಹೇಳಿಕೆ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಪುತ್ತೂರಿಗೆ ಅಮಿತ್ ಶಾ ಭೇಟಿಗೆ ಶುಭಕೋರಿ ನಗರದಲ್ಲಿ ಹಿಂದೂ ಮುಖಂಡ ಅರುಣ್ ಪುತ್ತಿಲ ಬೆಂಬಲಿಗರು ಕಟೌಟ್, ಬ್ಯಾನರ್ ಅಳವಡಿಸಿದ್ದರು. ಪುತ್ತೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯೂ ಆಗಿರುವ ಅರುಣ್ ಪುತ್ತಿಲ ಅವರ ಕಟೌಟ್ ಮತ್ತು ಬ್ಯಾನರ್‌ನಲ್ಲಿ ಬಿಜೆಪಿ ನಾಯಕರ ಭಾವಚಿತ್ರಗಳಿದ್ದರೂ ಶಾಸಕ ಮಠಂದೂರು ಭಾವಚಿತ್ರ ಹಾಕಿರಲಿಲ್ಲ ಇದಕ್ಕೆ ಆಕ್ರೋಶ ವಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಸಾಮಾಜಿಕ ಜಾಲತಾಣಗಳಾದ ಟ್ವಿಟರ್, ಫೇಸ್ ಬುಕ್ ಗಳಲ್ಲಿ ಪುತ್ತೂರಿನ ಹಿಂದೂ ಮುಖಂಡ ಅರುಣ್ ಪುತ್ತಿಲ ಬಿಜೆಪಿ ಅಭ್ಯರ್ಥಿ ಎಂಬ ಹೆಸರಿನಲ್ಲಿ ಅಭಿಯಾನ ಶುರುವಾಗಿದೆ. ಹಿಂದೂ ಸಂಘಟನೆಗಳು ಪುತ್ತೂರಿನ ಹಾಲಿ ಬಿಜೆಪಿ ಶಾಸಕ ಸಂಜೀವ ಮಠಂದೂರು ವಿರುದ್ಧವೇ ತೊಡೆ ತಟ್ಟಿ ಒರ್ವ ಶ್ರೇಷ್ಠ ಮತ್ತು ದೂರದೃಷ್ಟಿಯ ಶಾಸಕನ ಅಗತ್ಯ ಇದೆ ಎಂದು ಬರೆದುಕೊಂಡಿದ್ದಾರೆ. #Putthilaforputtur ಹ್ಯಾಷ್ ಟ್ಯಾಗ್ ನಡಿ ಫೇಸ್ ಬುಕ್ ಅಭಿಯಾನ ಶುರುವಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ತೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಹಾಲಿ ಶಾಸಕ ಸಂಜೀವ ಮಠಂದೂರು ವಿರುದ್ಧ ಅಭಿಯಾನ ಆರಂಭವಾಗಿದ್ದು, ಅರುಣ್ ಪುತ್ತಿಲ ಬಿಜೆಪಿ ಅಭ್ಯರ್ಥಿ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಮತ್ತೊಂದೆಡೆ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಗಾಗಿ ಹಲವು ಆಕಾಂಕ್ಷಿಗಳ ಹೆಸರು ಕೂಡ ಕೇಳಿಬರುತ್ತಿದೆ. ಈ ಅಭಿಯಾನದಿಂದ ಅವರೆಲ್ಲರಿಗೂ ಇರಿಸು ಮುರಿಸು ಪ್ರಾರಂಭವಾಗಿದೆ. ಮತ್ತೆ ಕೆಲವರು ಅಭಿಯಾನಕ್ಕೆ ವಿರೋಧಿಸಿ ಟ್ವಿಟ್ ಮತ್ತು ಮೆಸೇಜ್‌ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಇನ್ನು ಶನಿವಾರ ಅಮಿತ್ ಶಾ ಪುತ್ತೂರು ಭೇಟಿ ವೇಳೆಯೂ ಆಕ್ರೋಶ ಭುಗಿಲೇಳುವ ಸಾಧ್ಯತೆಯಿದೆ.