ಹಣ ಮಾಡುವ ಉದ್ದೇಶ ಇದ್ದಿದ್ದರೆ ಬೆಳಗಾವಿಯಿಂದ ಕಾರ್ಕಳಕ್ಕೆ ಬರಬೇಕಿರಲಿಲ್ಲ: ನಕಲಿ ಹಿಂದುತ್ವ ಮತ್ತು ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕಾಗಿ ನನ್ನ ಸ್ಪರ್ಧೆ: ಮುತಾಲಿಕ್
Wednesday, February 15, 2023
ಕಾರ್ಕಳ: ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗುವ ಮುನ್ನವೇ ಚುನಾವಣಾ ಪ್ರಚಾರದ ಅಬ್ಬರ ಜೋರಾಗಿದೆ ಹಾಲಿ ಸಚಿವರು, ಶಾಸಕರು, ಹಿಂದಿನ ಚುನಾವಣೆಯಲ್ಲಿ ಸೋತವರೂ ಕೂಡ ತಮ್ಮ ಕ್ಷೇತ್ರಗಳಲ್ಲಿ ಜನರನ್ನು ಮನ ಓಲೈಸ ಭರ್ಜರಿ ತಾಲೀಮು ಆರಂಭಿಸಿದ್ದಾರೆ. ಇದರ ಎಲ್ಲ
ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಈ ಬಾರಿಯ ಚುನಾವಣೆಯಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಕಾರ್ಕಳದಲ್ಲಿ ನಕಲಿ ಹಿಂದುತ್ವ ಹಾಗೂ ಭ್ರಷ್ಟಾಚಾರದ ವಿರುದ್ಧ ನನ್ನ ಹೋರಾಟ ಎಂದು ಪ್ರಮೋದ್ ಮುತಾಲಿಕ್ ಈಗಾಗಲೇ ಘೋಷಣೆ ಮಾಡಿದ್ದು ಕಾರ್ಯಕರ್ತರ ವಿರುದ್ಧ ದಬ್ಬಾಳಿಕೆ ಹಾಗೂ ಸ್ವಜನ ಪಕ್ಷಪಾತದ ವಿರುದ್ಧ ನನ್ನ ಹೋರಾಟ ಎಂದು ಈಗಾಗಲೇ ಮತ ಸಮರಕ್ಕೆ ಶಂಖನಾದ ಮೊಳಗಿಸಿದ್ದಾರೆ.
ಈ ನಡುವೆ ನೀವು ಕೇವಲ ಹಣ ಮಾಡಲು ಕಾರ್ಕಳಕ್ಕೆ ಬಂದಿದ್ದೀರ ಎಂದು ಸುನಿಲ್ ಕುಮಾರ್ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿ ಸುದ್ದಿಗಾರರೊಂದಿಗೆ ಮಾತನಾಡಿರುವ ಪ್ರಮೋದ್ ಮುತಾಲಿಕ್, ಸಚಿವ ಸುನಿಲ್ ಕುಮಾರ್ ಅವರು ಸೋಲಿನ ಭೀತಿಯಿಂದ ಆತಂಕಕ್ಕೆ ಒಳಗಾಗಿದ್ದಾರೆ. ನನಗೆ ದುಡೇ ಗಳಿಸಬೇಕಾಗಿದ್ದರೆ ನನಗೆ 45 ವರ್ಷ ಬೇಕಾಗಿರಲಿಲ್ಲ. ನನಗೀಗ 68 ವರ್ಷ ವಯಸ್ಸು ಒಂಟಿ ಜೀವ ನಾನು, ಅವಿವಾಹಿತ ಕೂಡ. ನನಗೆ ಈ ಆಸ್ತಿ ಮಾಡುವ ಯಾವುದೇ ಚಪಲ ಇಲ್ಲ. ನನ್ನ ಸಿದ್ಧಾಂತ ಹಿಂದುತ್ವ ಹಾಗೂ ಭ್ರಷ್ಟಾಚಾರ ರಹಿತ ಆಡಳಿತಕ್ಕಾಗಿ ಮೀಸಲು ಎಂದು ತಿರುಗೇಟು ನೀಡಿದ್ದಾರೆ.
ಕಾರ್ಕಳದಲ್ಲಿ ಚುನಾವಣೆಗೆ ಸ್ಪರ್ಧಿಸುವುದಕ್ಕಿಂತ ಮುನ್ನ ನೀವು ಹೇಗೆ ಇದ್ದಿರಿ. ಈಗ ಎಷ್ಟು ಬೆಳೆದಿದ್ದೀರಿ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಿ. ಕಾರ್ಯಕರ್ತರನ್ನು ಹಾಗೂ ಮತದಾರರನ್ನು ದಬ್ಬಾಳಿಕೆ ಮಾಡಿದ ಪರಿಣಾಮವಾಗಿ ಇಡೀ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ನಿಮ್ಮ ವಿರುದ್ಧ ಆಕ್ರೋಶ ದಿನೇದಿನೇ ಹೆಚ್ಚಾಗುತ್ತಿದ್ದು ಇದರಿಂದ ಸುನಿಲ್ ಕುಮಾರ್ ಮಾನಸಿಕ ಸ್ಥಿಮಿತ ಕಳೆದುಕೊಂಡು ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ನಾನು ಚುನಾವಣಾ ಪ್ರಚಾರ ಮಾಡುತ್ತಿರುವ ಕಾರ್ಯಕರ್ತರ ಓಡಾಟ ಊಟ ತಿಂಡಿ ಪ್ರವಾಸಕ್ಕೆ ನೂರು ರೂಪಾಯಿ ಕೇಳಿದ್ದೇನೆ. ಕಾರ್ಕಳದ 40 ಹಳ್ಳಿಗಳನ್ನು ತಲುಪಲು ನಾನೊಬ್ಬನೇ ಪಾದಯಾತ್ರೆ ಮಾಡಲು ಸಾಧ್ಯವಿಲ್ಲ. ಡೋಂಗಿ ಹಿಂದೂವಾದ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡಲು ನಾನು ಬಂದಿದ್ದೇನೆ. ಅಸಲಿ ಹಿಂದುತ್ವ ತೋರಿಸಿ ಕೊಡಲು ಕಾರ್ಕಳಕ್ಕೆ ಬಂದಿದ್ದೇನೆ. ಇನ್ನು ಮತದ ಜೊತೆಗೆ ಮತದಾರರಿಂದ ನೂರು ರೂಪಾಯಿ ಕೇಳುತ್ತಿದ್ದೇನೆ, ನಾನು ನಿಮ್ಮ ಹಾಗೆ ಆಸ್ತಿ ಕೋಟ್ಯಾಂತರ ರೂ. ಬ್ಯಾಂಕ್ ಬ್ಯಾಲೆನ್ಸ್ ಬೇನಾಮಿ ಜಮೀನು ಮಾಡಿದ್ದರೆ ಹಣ ಕೇಳುತ್ತಿರಲಿಲ್ಲ. ನನ್ನತ್ರ ಏನೂ ಇಲ್ಲ ನಾನು ಜನರಿಂದ ಹಣ ಕೇಳುತ್ತಿದ್ದೇನೆ ಎಂದು ಪ್ರತಿಕ್ರಿಯಿಸಿದರು.