
ಪರೀಕ್ಷೆ ವೇಳೆ ಹಿಜಾಬ್ ಧರಿಸಲು ಅನುಮತಿಗೆ ಅರ್ಜಿ : ವಿಚಾರಣೆಗೆ ಓಕೆ ಎಂದ ಸುಪ್ರೀಂಕೋರ್ಟ್
Thursday, February 23, 2023
ನವದೆಹಲಿ : ಕರ್ನಾಟಕದ ಪಿಯು ಕಾಳೇಜುಗಳಲ್ಲಿ ವಾರ್ಷಿಕ ಪರೀಕ್ಷೆಗಳನ್ನು ಹಿಜಾಬ್ ಧರಿಸಿ ಬರೆಯುವ ಅನುಮತಿ ಕೋರಿ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಪರಿಶೀಲಿಸಲು ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾ.ಪಿ.ಎಸ್.ನರಸಿಂಹ ಪೀಠವು ಬುಧವಾರ ತನ್ನ ಒಪ್ಪಿಗೆಯನ್ನು ಸೂಚಿಸಿದೆ.
ಶಾಲೆಯ ತರಗತಿಯೊಳಗೆ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ನಿಷೇಧಿಸುವ ವಿಷಯದ ಕುರಿತು ಈ ಹಿಂದೆ ಸುಪ್ರೀಂ ಕೋರ್ಟ್ ಭಿನ್ನ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಹಿಜಾಬ್ ಧರಿಸಿಕೊಂಡು ಬಂದರೆ ವಿದ್ಯಾರ್ಥಿನಿಯರಿಗೆ ಮಾರ್ಚ್ 9 ರಿಂದ ಪ್ರಾರಂಭವಾಗುವ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅನುಮತಿ ನೀಡಲಾಗುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠಕ್ಕೆ ತಿಳಿಸಲಾಯಿತು.
"ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಹೋದರೆ ಅವರನ್ನು ಪರೀಕ್ಷಾ ಹಾಲ್ ಒಳಗೆ ಕುಳಿತುಕೊಳ್ಳಲು, ಪರೀಕ್ಷೆ ಬರೆಯಲು ಅನುಮತಿ ನೀಡುವುದಿಲ್ಲ. ವಿದ್ಯಾರ್ಥಿಗಳಿಗೆ ಸದ್ಯದಲ್ಲಿಯೇ ಪರೀಕ್ಷೆ ಇರುವುದರಿಂದ ಮುಂದಿನ ಸೋಮವಾರ ಅಥವಾ ಶುಕ್ರವಾರದಂದು ವಿಚಾರಣೆ ನಡೆಸಲು ನ್ಯಾಯಾಲಯವು ಪರಿಗಣಿಸಬಹುದು ಎಂದು ವಕೀಲ ಶಾದನ್ ಫರಾಸತ್ ಹೇಳಿದರು.
ಹಿಜಾಬ್ ಧರಿಸುವುದನ್ನು ನಿಷೇಧಿಸಿರುವುದರಿಂದ ಕೆಲವು ಹುಡುಗಿಯರು ಖಾಸಗಿ ಸಂಸ್ಥೆಗಳಿಗೆ ತೆರಳಿದ್ದಾರೆ, ಆದರೆ ಸರ್ಕಾರಿ ಸಂಸ್ಥೆಗಳಲ್ಲಿ ಪರೀಕ್ಷೆ ಬರೆಯಬೇಕಾಗಿದೆ ಎಂದು ಅವರು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರನ್ನೊಳಗೊಂಡ ಪೀಠಕ್ಕೆ ತಿಳಿಸಿದರು. ಅನುಮತಿ ನೀಡದಿದ್ದರೆ ಇನ್ನೊಂದು ವರ್ಷ ವಿದ್ಯಾರ್ಥಿನಿಯರು ತಮ್ಮ ಕಲಿಕಾ ವರ್ಷವನ್ನು ಕಳೆದುಕೊಳ್ಳುವ ಅಪಾಯವಿದೆ ಎಂದು ಅವರು ಹೇಳಿದರು.