ಮಂಗಳೂರು: ಎಡಿಜಿಪಿ ಎದುರೇ ಪೊಲೀಸ್ ಕಮಿಷನರ್‌ನ ತರಾಟೆಗೆ ತೆಗೆದುಕೊಂಡ ಸಾಮಾಜಿಕ ಕಾರ್ಯಕರ್ತೆ
Friday, February 10, 2023
ಮಂಗಳೂರು: ನಗರದಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಅವರ ಸಾರ್ವಜನಿಕ ಕುಂದುಕೊರತೆ ಅಹವಾಲು ಸ್ವೀಕಾರ ಸಭೆಯಲ್ಲಿ ಸಾಮಾಜಿಕ ಕಾರ್ಯಕರ್ತೆಯೊಬ್ಬರು ಮಂಗಳೂರು ನಗರ ಪೊಲೀಸ್ ಕಮಿಷನರ್ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಎಡಿಜಿಪಿ ಅಲೋಕ್ ಕುಮಾರ್ ಅವರು ಸಾರ್ವಜನಿಕ ಕುಂದುಕೊರತೆ ಅಹವಾಲು ಸ್ವೀಕಾರ ಸಭೆಯನ್ನು ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ನಡೆಸಿದ್ದರು. ಈ ವೇಳೆ ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿಯವರು, ಮಾಧ್ಯಮದ ಮುಂದೆಯೇ ಎಡಿಜಿಪಿ ಅಲೋಕ್ ಕುಮಾರ್ ಅವರಲ್ಲಿ ಮಂಗಳೂರು ಪೊಲೀಸ್ ಇಲಾಖೆಯ ವಿರುದ್ಧ ಭ್ರಷ್ಟಾಚಾರ ಆರೋಪದ ಸುರಿಮಳೆಯನ್ನೇ ಮಾಡಿದರು.
ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಲಂಚವತಾರ ತಾಂಡವವಾಡುತ್ತಿದೆ. ದಾಖಲೆ ಸಹಿತ ಕೊಡುತ್ತೇನೆ. ಸಂತ್ರಸ್ತರನ್ನು ಕರೆದು ತಮ್ಮ ಮುಂದೆ ನಿಲ್ಲಿಸುತ್ತೇನೆ. ಈ ಬಗ್ಗೆ ತಾನು ಕಮಿಷನರ್ ಅವರಲ್ಲಿ ಭೇಟಿಗೆ ಅವಕಾಶ ಕೇಳಿದರೆ ಈವರೆಗೆ ಅವಕಾಶ ದೊರಕಿಲ್ಲ. ಪೊಲೀಸ್ ಅಧಿಕಾರಿಗಳದ್ದೇ ಲಾಡ್ಜ್, ಸಲೂನ್ ಗಳು ಮಂಗಳೂರಲ್ಲಿ ಕಾರ್ಯಾಚರಿಸುತ್ತಿದೆ. ನಾವೇನಾದರೂ ಇದನ್ನು ದೂರು ನೀಡಿದ್ದಲ್ಲಿ ನಮ್ಮ ಮೇಲೆ ಕೇಸು ದಾಖಲಿಸಿ ಸಿಕ್ಕಿಸಿ ಹಾಕುತ್ತಾರೆ. ರಾಜಕಾರಣಿಗಳ ದಾಳಕ್ಕೆ ತಕ್ಕಂತೆ ಮಂಗಳೂರು ಪೊಲೀಸ್ ಕಮಿಷನ ಕುಣಿಯುತ್ತಿದ್ದಾರೆ. ಜನಸಾಮಾನ್ಯರ ಸಮಸ್ಯೆಗಳಿಗೆ ಕಿವಿಗೊಡುತ್ತಿಲ್ಲ ಎಂದು ಆರೋಪಗಳ ಸುರಿಮಳೆಯನ್ನೇ ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಮಾಡಿದರು. ಅವರ ಆರೋಪಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಹಾಗೂ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಅವರು ತಬ್ಬಿಬ್ಬಾಗಿದ್ದಾರೆ.