ಹಳೆಯಂಗಡಿಯಲ್ಲಿ HIT AND RUN ಗೆ ಇಬ್ಬರು ಬಲಿ- ಮಂಗಳೂರಿನ ಯೂಟ್ಯೂಬರ್ ಅರೆಸ್ಟ್ !
Saturday, February 4, 2023
ಮಂಗಳೂರು; ಮೂಲ್ಕಿಯ ಹಳೆಯಂಗಡಿ-ಪಡುಪಣಂಬೂರು ರಾಷ್ಟ್ರೀಯ ಹೆದ್ದಾರಿಯ ಪೆಟ್ರೋಲ್ ಬಂಕ್ ಬಳಿ ಕಳೆದ ಮಂಗಳವಾರ ಮಧ್ಯರಾತ್ರಿ ನಡೆದ ಅಪಘಾತ ಪ್ರಕರಣದಲ್ಲಿ ಪರಾರಿಯಾಗಿದ್ದ ಯೂಟ್ಯೂಬ ರನ್ನು ಪೊಲೀಸರು ಬಂಧಿಸಿದ್ದು, ಆತ ಜಾಮೀನಿನ ಮೇಲೆ ಹೊರಬಂದಿದ್ದಾನೆ.
ಮಂಗಳವಾರ ರಾತ್ರಿ1 ಗಂಟೆಯ ಸುಮಾರಿಗೆ ಹಿಟ್ ಆಂಡ್ ರನ್ ಮಾಡಿ ಈತ ಇಬ್ಬರ ಸಾವಿಗೆ ಕಾರಣನಾಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿ ನಾಪತ್ತೆಯಾಗಿದ್ದ ಕಾರ್ ಚಾಲಕನನ್ನು ಮಂಗಳೂರು ಉತ್ತರ ಸಂಚಾರಿ ಠಾಣಾ ಪೊಲೀಸರು ಕಾರು ಸಮೇತ ವಶಕ್ಕೆ ಪಡೆದಿದ್ದಾರೆ. ಆತ ಜಾಮೀನು ಪಡೆದುಕೊಂಡು ಹೊರ ಬಂದಿದ್ದಾನೆ.
"ಮ್ಯಾಡ್ ಇನ್ ಕುಡ್ಲ" ಹೆಸರಿನ ಯೂಟ್ಯೂಬರ್ ಹಳೆಯಂಗಡಿ ಇಂದಿರಾನಗರ ನಿವಾಸಿ ಅರ್ಪಿತ್(35) ಆರೋಪಿ. ಮಧ್ಯಪ್ರದೇಶದಿಂದ ಕೇರಳ ಕಡೆಗೆ ಹೋಗುತ್ತಿದ್ದ ಲಾರಿಯ ಟೈರ್ ಪಂಕ್ಚರ್ ಆಗಿದ್ದು ಹೆದ್ದಾರಿ ಬದಿ ನಿಲ್ಲಿಸಿದ್ದ ವೇಳೆ ಅರ್ಪಿತ್ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ್ದ ಕಾರು ತೀರಾ ಎಡಗಡೆಗೆ ಬಂದು ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಬಬುಲು(23), ಆಚಲ್ ಸಿಂಗ್ (30) ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅವರ ಶವದ ಭಾಗಗಳು ಹೆದ್ದಾರಿ ತುಂಬಾ ಚೆಲ್ಲಾಡಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದರು. ಘಟನೆಯಲ್ಲಿ ಕೇರಳ ನಿವಾಸಿ ಅನೀಶ್(42) ಗಂಭೀರ ಗಾಯಗೊಂಡಿದ್ದಾರೆ.