ಮಂಗಳೂರಿನ ಪ್ಲ್ಯಾಟ್ ನಲ್ಲೆ ಗಾಂಜಾ ಮಾರಾಟ- ಬಂಧಿತ ಆರೋಪಿ Overseas Citizen !
Sunday, January 8, 2023
ಮಂಗಳೂರು: ನಗರದ ಫ್ಲಾಟ್ ವೊಂದರಲ್ಲಿ ಮಾದಕ ವಸ್ತುವಾದ ಗಾಂಜಾವನ್ನು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ (Overseas Citizen of India) ಸಾಗರೋತ್ತರ ಭಾರತೀಯ ಪ್ರಜೆಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನಗರದ ಬಂಟ್ಸ್ ಹಾಸ್ಟೆಲ್ ನಲ್ಲಿರುವ ಫ್ಲ್ಯಾಟ್ ನಲ್ಲಿ ವಾಸವಿದ್ದ ನೀಲ್ ಕಿಶೋರಿಲಾಲ್ ರಾಮ್ ಜಿ ಶಾ(38) ಬಂಧಿತ ಆರೋಪಿ.
ಈತ (Overseas Citizen of India) ಸಾಗರೋತ್ತರ ಭಾರತೀಯ ಪ್ರಜೆಯಾಗಿದ್ದಾನೆ. ಮಂಗಳೂರು ನಗರದ ಬಂಟ್ಸ್ ಹಾಸ್ಟೆಲ್ ಪರಿಸರದ ಫ್ಲಾಟ್ ವೊಂದರಲ್ಲಿ ನಿಷೇಧಿತ ಮಾದಕ ವಸ್ತುವಾದ ಗಾಂಜಾವನ್ನು ಹೊಂದಿಕೊಂಡು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಇನ್ಸ್ ಪೆಕ್ಟರ್ ಶ್ಯಾಮ್ ಸುಂದರ್ ಹೆಚ್ ಎಂ ರವರ ನೇತ್ರತ್ವದ ಸಿಸಿಬಿ ಪೊಲೀಸರು ಗಾಂಜಾವನ್ನು ಹೊಂದಿದ ಫ್ಲಾಟಿಗೆ ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ.
ಈತನನ್ನು ವಶಕ್ಕೆ ಪಡೆದುಕೊಂಡು ಆತನಿಂದ ಒಟ್ಟು 2 ಕೆ ಜಿ ತೂಕದ ರೂ. 50,000/- ಮೌಲ್ಯದ ಗಾಂಜಾ, 2 ಮೊಬೈಲ್ ಫೋನ್, ನಗದು ರೂ 7000/- ಡಿಜಿಟಲ್ ತೂಕ ಮಾಪನ ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ಆಂದಾಜು ರೂ 78,000/-ಆಗಬಹುದು. ಆರೋಪಿಯು ಅಕ್ರಮವಾಗಿ ಮಾದಕ ವಸ್ತುಗಳನ್ನು ವಿಶಾಖಪಟ್ಟಣದಿಂದ ಖರೀದಿಸಿಕೊಂಡು ಬಂದು ಮಂಗಳೂರು ನಗರದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದನು ಈ ಬಗ್ಗೆ ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣದಲ್ಲಿ ಇನ್ನೂ ಹಲವು ಆರೋಪಿಗಳು ಭಾಗಿಯಾಗಿದ್ದು, ಪತ್ತೆ ಕಾರ್ಯ ಮುಂದುವರಿದಿದೆ.
ಈ ಮಾದಕ ವಸ್ತು ಗಾಂಜಾ ಮಾರಾಟದ ಆರೋಪಿ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಪೊಲೀಸ್ ಇನ್ಸ್ ಪೆಕ್ಟರ್ ಶ್ಯಾಮ್ ಸುಂದರ್ ಹೆಚ್ ಎಂ ಪಿಎಸ್ಐ ಯವರಾದ ರಾಜೇಂದ್ರ ಬಿ, ಸುದೀಪ್ ಎಂ ವಿ ಹಾಗೂ ಸಿಸಿಬಿ ಸಿಬ್ಬಂದಿಯವರು ಪಾಲ್ಗೊಂಡಿದ್ದರು.