ಮಂಗಳೂರು- ಕೇರಳ ಕರ್ನಾಟಕದ ಗಡಿಯಲ್ಲಿ MDMA( Synthetic Drug) ಮಾರಾಟ- ಕೈರಂಗಳ ನವ್ವಾ ಬಲೆಗೆ
Sunday, January 8, 2023
ಮಂಗಳೂರು; ಮಾದಕ ವಸ್ತುವಾದ (Methylene dioxy methamphetamine) MDMA ನ್ನು ಹೊಂದಿಕೊಂಡು ಕೇರಳ-ಕರ್ನಾಟಕದ ಗಡಿಭಾಗದಲ್ಲಿ ಮಾರಾಟ ಮಾಡುತ್ತಿದ್ದವನನ್ನು ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಉಳ್ಳಾಲ ತಾಲೂಕಿನ ಮುಡಿಪು ಕೈರಂಗಳದ ಗೌಸಿಯಾ ಕಂಪೌಂಡ್ ನ ನವಾಝ್ ಯಾನೆ ನವ್ವಾ ಯಾನೆ ಮುಡಿಪು ನವಾಸ್ ಬಂಧಿತ ಆರೋಪಿ.
ನಿಷೇಧಿತ ಮಾದಕ ವಸ್ತುವಾದ (Methylene dioxy methamphetamine) MDMA ವನ್ನು ಕೇರಳದ ಗಡಿಭಾಗ ಹಾಗೂ ಮುಡಿಪು ಪರಿಸರದಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಇನ್ಸ್ ಪೆಕ್ಟರ್ ಶ್ಯಾಮ್ ಸುಂದರ್ ಹೆಚ್ ಎಂ ರವರ ನೇತೃತ್ವದ ಮಂಗಳೂರು ಸಿಸಿಬಿ ಪೊಲೀಸರು ಮುಡಿಪು ಪಂಚಾಯತ್ ಮೈದಾನ ಪರಿಸರದಲ್ಲಿ ಬೈಕ್ ನಲ್ಲಿ ಬಂದು ನಿಷೇದಿತ ಮಾದಕ ವಸ್ತು MDMA ನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ನವ್ವಾ ನನ್ನು ತಪಾಸಣೆ ಮಾಡಿದಾಗ ಎಂಡಿಎಂಎ (Methylene dioxy methamphetamine) ಪತ್ತೆಯಾಗಿದೆ.
ಈತನನ್ನು ವಶಕ್ಕೆ ಪಡೆದುಕೊಂಡು ಆತನಿಂದ ಒಟ್ಟು 15 ಗ್ರಾಂ ತೂಕದ ರೂ. 75,000/- ಮೌಲ್ಯದ ಎಂಡಿಎಂಎ ಮಾದಕ ವಸ್ತುವನ್ನು, ಮೊಬೈಲ್ ಫೋನ್ -2, ಡಿಜಿಟಲ್ ತೂಕ ಮಾಪನ, ನಗದು ರೂ. 3200/- ಹಾಗೂ ಸಾಗಾಟಕ್ಕೆ ಉಪಯೋಗಿಸಿದ ಬಜಾಜ್ ಅವೆಂಜರ್ ಬೈಕ್ ನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ನಿಷೇದಿತ ಮಾದಕ ವಸ್ತು ಎಂಡಿಎಂಎ, ಮೊಬೈಲ್ ಫೋನ್, ನಗದು ಹಾಗೂ ಸಾಗಾಟಕ್ಕೆ ಉಪಯೋಗಿಸಿದ ಬೈಕ್ ನ ಒಟ್ಟು ಮೌಲ್ಯ ರೂ 1,13,700/-ಆಗಬಹುದು ಎಂದು ಅಂದಾಜಿಸಲಾಗಿದೆ.
ಆರೋಪಿಯು ಅಕ್ರಮವಾಗಿ ಮಾದಕ ವಸ್ತುಗಳನ್ನು ಖರೀದಿಸಿಕೊಂಡು ದೇರಳಕಟ್ಟೆ,ತಲಪಾಡಿ, ಉಳ್ಳಾಲ ಹಾಗೂ ಮಂಗಳೂರು ನಗರ ಪರಿಸರದಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದು, ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣದಲ್ಲಿ ಇನ್ನೂ ಹಲವು ಆರೋಪಿಗಳು ಭಾಗಿಯಾಗಿದ್ದು, ಪತ್ತೆ ಕಾರ್ಯ ಮುಂದುವರಿದಿದೆ.
ಆರೋಪಿ ನವಾಝ್ ಯಾನೆ ನವ್ವಾ ಯಾನೆ ಮುಡಿಪು ನವಾಸ್ ಎಂಬಾತನ ವಿರುದ್ಧ ಈ ಹಿಂದೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಹಲ್ಲೆ, ಕೊಲೆಯತ್ನ, ದರೋಡೆಗೆ ಸಂಬಂಧಪಟ್ಟಂತೆ ಒಟ್ಟು 8 ಪ್ರಕರಣಗಳು, ಮುಲ್ಕಿ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ , ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆಯತ್ನ ನಡೆಸಿದ ಪ್ರಕರಣ ಹೀಗೆ ಒಟ್ಟು 11 ಪ್ರಕರಣಗಳು ದಾಖಲಾಗಿರುತ್ತದೆ.
ಈ ಮಾದಕ ವಸ್ತು ಮಾರಾಟದ ಆರೋಪಿ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಪೊಲೀಸ್ ಇನ್ಸ್ ಪೆಕ್ಟರ್ ಶ್ಯಾಮ್ ಸುಂದರ್ ಹೆಚ್ ಎಂ ಪಿಎಸ್ಐ ಯವರಾದ ರಾಜೇಂದ್ರ ಬಿ, ಸುಧೀಪ್ ಎಂ ವಿ ಹಾಗೂ ಸಿಸಿಬಿ ಸಿಬ್ಬಂದಿಯವರು ಪಾಲ್ಗೊಂಡಿದ್ದರು.