
ಆರಿತು ಒಲವಿನ ಪೂಜೆಯ ದೀಪ: ಜಮಾನದ ನಟಿ ಜಮುನಾಗೆ ಸಂತಾಪ
ಒಲವಿನ ಪೂಜೆಗೆ ಒಲವೇ ಮಂದಾರ ಒಲವೇ ಬದುಕಿನ ಮಂದಾರ ಒಲವಿನ ನೆನಪೇ ಹೃದಯಕೆ ಮಧುರ ಒಲವೇ ದೈವದ ಸಾಕ್ಷಾತ್ಕಾರ
ಅಣ್ಣಾವ್ರು ನಟಿಸಿದ ಸಾಕ್ಷಾತ್ಕಾರ ಚಿತ್ರದ ಈ ಹಾಡಿಗೆ ಸಾವಿರ ವರ್ಷ ಕಳೆದರೂ ಸಾವಿಲ್ಲ. ಈ ಹಾಡಿನಲ್ಲಿ ಕಮಲ ಕಣ್ಣಿನ ಸುಂದರಿಯೊಬ್ಬಳು ಸರ್ವರೂ ಸೈ ಎನ್ನುವಂತೆ ನಟಿಸಿ ಚಿತ್ರ ರಸಿಕರ ಚಿತ್ತ ಕದ್ದಿದ್ದಳು. ಆ ನಟಿ ಬೇರಾರೂ ಅಲ್ಲ. ಅವರೇ ಜಮುನಾ..
60-70ರ ದಶಕದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ಜಮುನಾ ಇಂದು (ಜನವರಿ 27) ಇಹಲೋಕ ತ್ಯಜಿಸಿದ್ದಾರೆ. ಬಹುಭಾಷೆಯಲ್ಲಿ ನಟಿಸಿದ್ದ ಅವರು ಕನ್ನಡದ ಹತ್ತಾರು ಸಿನಿಮಾಗಳಲ್ಲಿ ಮಿಂಚಿದ್ದಾರೆ. ಅದರಲ್ಲೂ ದಿಗ್ಗಜ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಸಾಕ್ಷಾತ್ಕಾರ ಸಿನಿಮಾದಲ್ಲಿ ಜಮುನಾ ಮಾಡಿದ್ದ ಉಮಾ ಪಾತ್ರವನ್ನು ನೋಡಿದ ಕನ್ನಡಿಗರು ಧುಮ್ಮಿಕ್ಕಿ ಹರಿಯುವ ಜಲಧಾರೆಯನ್ನು
ಮರೆಯಲಾರರು..
1971ರಲ್ಲಿ ತೆರೆ ಕಂಡ ಈ ಚಿತ್ರದಲ್ಲಿ ವರನಟ ಡಾ. ರಾಜ್‌ಕುಮಾರ್‌ಗೆ ಭಾವಬೆಸುಗೆಯ ಜೋಡಿಯಾಗಿ ನಟಿಸಿದ್ದ ಜಮುನಾ ಇಂದಿಗೂ ನೆನಪಾಗಿ ಉಳಿದಿದ್ದಾರೆ. ಕಣಗಾಲ್ ಪ್ರಭಾಕರ್ ಶಾಸ್ತ್ರಿ ಅವರು ಬರೆದ ಈ ಹಾಡಿಗೆ ಎಂ.ರಂಗರಾವ್ ಸಂಗೀತ ನೀಡಿದ್ದರು. ಸಾಹಿತ್ಯಕ್ಕೆ ಜೀವಧ್ವನಿಯಾದವರು ಪಿ.ಬಿ ಶ್ರೀನಿವಾಸ್ ಹಾಗೂ ಪಿ. ಸುಶೀಲಾ,
ವಸಂತ ಕೋಗಿಲೆ ಪಂಚ ಮನೋಂಚರ ಗಾಂಧಾರ ಭಾಷೆಯ ಹಕ್ಕಿಗಳಿಂಚರ ಈ ಮಲೆನಾಡಿನ ಭೂರಮೆ ಶೃಂಗಾರ ಚೆಲುವಿನ ಒಲವಿನ ಸಾಕ್ಷಾತ್ಕಾರ
ಹೆಮ್ಮೆಯ ಸಂಗತಿ ಅಂದರೆ ಅಪ್ಪಟ ಕನ್ನಡ ನೆಲವಾದ ಈಗಿನ ವಿಜಯ ನಗರ ಜಿಲ್ಲೆ ಹಂಪಿಯಲ್ಲಿ ಇವರು 1936ರಲ್ಲಿ ಜನಿಸಿದರು. ಬಾಲ್ಯದಿಂದಲೂ ನಾಟಕ ಕಂಪನಿಗಳ ಸಂಪರ್ಕ ಬೆಳೆದಿದ್ದರಿಂದ ಮೊದಲು ತೆಲುಗು ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. 1953ರಲ್ಲಿ ತೆಲುಗಿನ 'ಪುಟ್ಟಿಲ್ಲು' ಸಿನಿಮಾದಲ್ಲಿ ಮೊದಲ
ಬಾರಿಗೆ ಬಣ್ಣ ಹಚ್ಚಿದ ಜಮುನಾ ಕ್ಯಾಮೆರಾ ಮುಂದೆ ಬಂದರು. ಅದಾದ ನಂತರ ತೆಲುಗು ಸಿನಿ ರಂಗದ ದೈತ್ಯ ಪ್ರತಿಭೆಗಳೊಂದಿಗೆ ಜಮುನಾ ಅಭಿನಯಿಸಿದರು. ತಮ್ಮ ವಿಭಿನ್ನ ಆಂಗಿಕ ಭಾಷೆಯ ನಟನೆಯ ಮೂಲಕ ಅನೇಕ ಅವಕಾಶಗಳನ್ನು ಬಳಸಿಕೊಂಡು ಬೆಳ್ಳಿ ತೆರೆಯನ್ನು ಬೆಳಗಿದರು.
ಜತೆಗೆ ಕನ್ನಡದಲ್ಲಿ, ಭೂ ಕೈಲಾಸ, ಸಾಕ್ಷಾತ್ಕಾರ, ರತ್ನಗಿರಿ ರಹಸ್ಯ, ಆದರ್ಶ ಸತಿ, ಮಾಯೆಯ ಮುಸುಕು, ಪೊಲೀಸ್ ಮತ್ತು ದಾದಾ ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರಬುದ್ಧ, ಪಕ್ವ ನಟನೆಗೆ ಅನೇಕ ರಾಜ್ಯ ಮಟ್ಟದ ಹಾಗೂ ರಾಷ್ಟ್ರ ಪ್ರಶಸ್ತಿಗಳಿಗೆ ಇವರು ಭಾಜನರಾಗಿದ್ದಾರೆ.
ರಾಜಕೀಯದಲ್ಲೂ ನಿರೀಕ್ಷಿತ ಸಕ್ಸಸ್ ಕಂಡಿದ್ದ ನಟಿ ಜಮುನಾ ಆಂಧ್ರದ ರಾಜಮುಂಡ್ರಿ ಕ್ಷೇತ್ರದಿಂದ 1989ರಲ್ಲಿ ಸಂಸದೆಯಾಗಿ ಆಯ್ಕೆಯಾಗಿದ್ದರು. ಒಟ್ಟು 190 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ, ತೆರೆ ಮುಂದೆ ತೆರೆ ಹಿಂದೆ ಜನಮೆಚ್ಚುಗೆ ಗಳಿಸಿದ ನಟಿ ಇನ್ನಿಲ್ಲವಾಗಿದ್ದು ದಕ್ಷಿಣ ಭಾರತ ಚಿತ್ರರಂಗ ಹಾಗೂ ಟಾಲಿವುಡ್‌ಗೆ ಭರಿಸಲಾಗದ ನಷ್ಟವಾಗಿದೆ. ಜಮಾನ ಮೆಚ್ಚಿದ ನಟಿ ಜಮುನಾಗೆ ಪಬ್ಲಿಕ್ ನೆಕ್ಟ್ ನಿಂದ ಅಕ್ಷರ ನಮನ..